ಮ್ಯಾಡ್ರಿಡ್ (ಸ್ಪೇನ್): ತೆರಿಗೆ ವಂಚನೆ ಪ್ರಕರಣದ ಆರೋಪಿಯಾಗಿರುವ 'ಮೆಕಾಫೆ' ಎಂಬ ಆ್ಯಂಟಿವೈರಸ್ ಸಾಫ್ಟ್ವೇರ್ ಸಂಸ್ಥಾಪಕ ಜಾನ್ ಮೆಕಾಫೆ (75) ಸ್ಪೇನ್‌ನ ಜೈಲಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಕಾರಾಗೃಹದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಪ್ಯಾನಿಷ್ ನ್ಯಾಯಾಲಯವು ಮೆಕಾಫೆಯನ್ನು ಅಮೆರಿಕಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಿದ ಬೆನ್ನಲ್ಲೇ ಅವರ ಸಾವು ಸಂಭವಿಸಿದೆ.
ಬಾರ್ಸಿಲೋನಾ ಬಳಿಯ ಬ್ರಿಯಾನ್ಸ್ -2 ಕಾರಾಗೃಹದ ತನ್ನ ಕೋಣೆಯಲ್ಲಿ ಮೆಕಾಫೆ ಶವವಾಗಿ ಪತ್ತೆಯಾಗಿದೆ. ಇದು ಆತ್ಮಹತ್ಯೆಯೆಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದು ಈಶಾನ್ಯ ಕ್ಯಾಟಲೊನಿಯಾ ಪ್ರದೇಶದ ಜೈಲು ವ್ಯವಸ್ಥೆಯ ವಕ್ತಾರರು ಹೇಳಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅವರು ನೀಡಲಿಲ್ಲ.
ಪ್ರಕರಣ ಹಿನ್ನೆಲೆ:
ಜಾನ್ ಮೆಕಾಫೆ 1987ರಲ್ಲಿ ಅಮೆರಿಕದಲ್ಲಿ 'ಮೆಕಾಫೆ ಕಂಪ್ಯೂಟರ್ ಸೆಕ್ಯುರಿಟಿ ಸಂಸ್ಥೆ'ಯನ್ನು ಸ್ಥಾಪಿಸಿದ್ದರು. 2014ರಿಂದ 2018ರ ಅವಧಿಯಲ್ಲಿ ಮೆಕಾಫೆ 12 ಮಿಲಿಯನ್ ಡಾಲರ್ಗಿಂತಲೂ ಹೆಚ್ಚು ಆದಾಯ ಗಳಿಸಿದ್ದರೂ ಸರ್ಕಾರಕ್ಕೆ ತೆರಿಗೆ ಕಟ್ಟದೆ ವಂಚಿಸಿರುವ ಆರೋಪ ಎದುರಿಸುತ್ತಿದ್ದರು. ಅಪರಾಧ ಸಾಬೀತಾದರೆ ಅವರು 30 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಬೇಕಿತ್ತು.
2020ರ ಅಕ್ಟೋಬರ್ನಲ್ಲಿ ಇಸ್ತಾಂಬುಲ್‌ಗೆ ವಿಮಾನ ಹತ್ತಲು ಹೊರಟಿದ್ದ (ಬಹುಷಃ ಪರಾರಿಯಾಗಲು ಹೊರಟಿದ್ದ) ಮೆಕಾಫೆಯನ್ನು ಸ್ಪೇನ್‌ನ ಬಾರ್ಸಿಲೋನಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಅಂದಿನಿಂದ ಸ್ಪೇನ್‌ನ ಜೈಲಿನಲ್ಲಿದ್ದ ಮೆಕಾಫೆಯನ್ನು ಅಮೆರಿಕಕ್ಕೆ ಹಸ್ತಾಂತರಿಸಲು ನಿನ್ನೆ ಸ್ಪ್ಯಾನಿಷ್ ಕೋರ್ಟ್ ಸಮ್ಮತಿಸಿತ್ತು. ಆದರೆ ಇದಕ್ಕಿನ್ನೂ ಸ್ಪೇನ್ ಸಂಪುಟದ ಅನುಮತಿ ಬೇಕಿತ್ತು. ಅಲ್ಲದೇ ಈ ಬಗ್ಗೆ ಮೇಲ್ಮನವಿ ಸಲ್ಲಿಸಬಹುದಿತ್ತು. ಆದರೆ ಕೋರ್ಟ್ ಅನುಮೋದನೆ ನೀಡಿದ ಕೆಲವೇ ಗಂಟೆಗಳಲ್ಲಿ ಮೆಕಾಫೆ ಮೃತಪಟ್ಟಿರುವುದು ತಿಳಿದು ಬಂದಿದೆ.