ಕೀವ್(ಉಕ್ರೇನ್): ರಷ್ಯಾ-ಉಕ್ರೇನ್ ನಡುವಿನ ಸಂಘರ್ಷ 12ನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ಯುದ್ಧಪೀಡಿತ ದೇಶದಲ್ಲಿ ಸಿಲುಕಿರುವ ಭಾರತೀಯರು ಸೇರಿದಂತೆ ಇತರೆ ದೇಶಗಳ ನಾಗರಿಕರ ರಕ್ಷಣೆಗೋಸ್ಕರ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಕದನ ವಿರಾಮ ಘೋಷಿಸಿದ್ದಾರೆ.
ಉಕ್ರೇನ್ ರಾಜಧಾನಿ ಕೀವ್, ಮಾರಿಪೋಲ್, ಖಾರ್ಕಿವ್ ಮತ್ತು ಸುಮಿ ನಗರಗಳಲ್ಲಿ ಬೆಳಗ್ಗೆ 10ರಿಂದಲೇ ಕದನ ವಿರಾಮ ಘೋಷಣೆ ಮಾಡಲಾಗಿದೆ. ರಷ್ಯಾ ಮಿಲಿಟರಿ ಅನೇಕ ರೀತಿಯ ಮಾನವೀಯ ಕಾರಿಡಾರ್ ನಿರ್ಮಾಣ ಮಾಡಿದ್ದು ಜನರ ಸ್ಥಳಾಂತರಕ್ಕೆ ಅನುವು ಮಾಡುತ್ತಿದೆ.
ಇದನ್ನೂ ಓದಿ: ಉಕ್ರೇನ್ನ ವಸತಿ ಪ್ರದೇಶಗಳ ಮೇಲೆ ರಷ್ಯಾ ಶೆಲ್ ದಾಳಿ; ನಾಗರಿಕರ ಪರದಾಟ, ಜೀವಹಾನಿ
ಫೆ. 24ರಂದು ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡ್ತಿದ್ದಂತೆ ಭಾರತೀಯರು ಸೇರಿದಂತೆ ವಿವಿಧ ದೇಶಗಳ ಜನರು ತೊಂದರೆಗೊಳಗಾಗಿದ್ದರು. ಉಕ್ರೇನ್‌ಗೆ ವೈದ್ಯಕೀಯ ವ್ಯಾಸಂಗ ಮಾಡಲು ತೆರಳಿದ್ದ ಭಾರತದ ಸಾವಿರಾರು ವಿದ್ಯಾರ್ಥಿಗಳನ್ನು ಈಗಾಗಲೇ ಕೇಂದ್ರ ಸರ್ಕಾರ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದಿದೆ.
ಉಕ್ರೇನ್ನ ವಿವಿಧ ನಗರಗಳಲ್ಲಿ ಸಿಲುಕಿಕೊಂಡಿರುವ ನಾಗರಿಕ ರಕ್ಷಣೆಗೋಸ್ಕರ ಕಳೆದ ಎರಡು ದಿನಗಳ ಹಿಂದೆ ರಷ್ಯಾ ಕದನ ವಿರಾಮ ಘೋಷಣೆ ಮಾಡಿತ್ತು. ಇದರ ಹೊರತಾಗಿಯೂ ಕೂಡ ಕೆಲವೊಂದು ನಗರಗಳ ಮೇಲೆ ಬಾಂಬ್, ಶೆಲ್ ದಾಳಿ ನಡೆಸಿದೆ ಎಂದು ಉಕ್ರೇನ್ ಗಂಭೀರ ಆರೋಪ ಮಾಡಿದೆ. ಉಕ್ರೇನ್ನ ಕೀವ್, ಖಾರ್ಕಿವ್ ಸೇರಿದಂತೆ ವಿವಿಧ ನಗರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆಗೋಸ್ಕರ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದರು.