ರೋಮ್: ಈಗಾಗಲೇ ಅಮೆರಿಕ, ದಕ್ಷಿಣ ಕೊರಿಯಾ ರಾಷ್ಟ್ರಗಳು ತಮ್ಮ ದೇಶದಲ್ಲಿ ಲಸಿಕೆ ಪಡೆದವರಿಗೆ ಮಾಸ್ಕ್ ಧರಿಸಬೇಕಿಲ್ಲ ಎಂದು ಹೇಳಿವೆ. ಇದೀಗ ಯುರೋಪ್ ಖಂಡದ ಕೋವಿಡ್‌ಪೀಡಿತ ದೇಶವಾದ ಇಟಲಿ ಜೂನ್ 28 ರಿಂದ ಜನರು ಮುಖಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂದು ಘೋಷಿಸಿದೆ.
ವೈರಸ್ ಹರಡುವಿಕೆ ವೇಗದ ಆಧಾರದ ಮೇಲೆ ಇಟಲಿಯಲ್ಲಿ ಕೆಲ ಪ್ರದೇಶಗಳನ್ನು ವರ್ಗೀಕರಿಸಲಾಗಿದ್ದು, 'ಬಿಳಿ' ವಲಯ (White Zone) ಎಂದು ಗುರುತಿಸಿದ ಪ್ರದೇಶಗಳಲ್ಲಿ ಮಾಸ್ಕ್ ನಿಯಮವನ್ನು ತೆಗೆದುಹಾಕಲಾಗುತ್ತಿದೆ ಎಂದು ಇಟಲಿ ಆರೋಗ್ಯ ಸಚಿವ ರಾಬರ್ಟೊ ಸ್ಪೆರಾನ್ಜಾ ತಿಳಿಸಿದ್ದಾರೆ. ದೇಶದ ಕೋವಿಡ್ ಸಾವು-ನೋವಿನ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದ್ದು, ಆಸ್ಟಾ ಕಣಿವೆ ಹೊರತುಪಡಿಸಿ ಉಳಿದೆಲ್ಲಾ ಇಟಾಲಿಯನ್ ಪ್ರದೇಶಗಳು ವೈಟ್ ಝೋನ್ ಆಗಿವೆ.
ವೈಜ್ಞಾನಿಕ ಸಲಹಾ ಸಮಿತಿಯ ಸಲಹೆಯ ಮೇರೆಗೆ ಆರೋಗ್ಯ ಇಲಾಖೆ ಈ ನಿರ್ಧಾರಕ್ಕೆ ಬಂದಿದ್ದು, ಹೆಚ್ಚು ಜನರು ಸೇರುವ ಕೂಟಗಳು, ಕಾರ್ಯಕ್ರಮಗಳಲ್ಲಿ ಮಾತ್ರ ಜನರು ಮಾಸ್ಕ್ ಧರಿಸುವಂತೆ ಸೂಚಿಸಿದೆ. ಸೋಮವಾರ ಕೇವಲ 21 ಸಾವುಗಳು ಮತ್ತು 495 ಹೊಸ ಪ್ರಕರಣಗಳು ದೇಶಾದ್ಯಂತ ದಾಖಲಾಗಿದ್ದು, ಜೂನ್ 28ರ ವೇಳೆಗೆ ಸಂಪೂರ್ಣ ಇಟಲಿ ದೇಶವೇ ಬಿಳಿ ವಲಯವಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಇದನ್ನೂ ಓದಿ: South Korea Covid-19: ಕೊರೊನಾ ಲಸಿಕೆ ಪಡೆದವರು ಮಾಸ್ಕ್ ಧರಿಸಬೇಕಿಲ್ಲ: ದಕ್ಷಿಣ ಕೊರಿಯಾ
ಕಳೆದ ವರ್ಷ ಕೊರೊನಾ ಆರಂಭದಲ್ಲಿ ಇಟಲಿ ಭೀಕರ ಪರಿಸ್ಥಿತಿಯನ್ನು ಎದುರಿಸಿತ್ತು. ಇಲ್ಲಿಯವರೆಗೆ ರಾಷ್ಟ್ರದಲ್ಲಿ ಒಟ್ಟು 4.25 ಮಿಲಿಯನ್ ಜನರಿಗೆ ವೈರಸ್ ಅಂಟಿದ್ದು, 1,27,291 ಮಂದಿ ಮೃತಪಟ್ಟಿದ್ದಾರೆ. ದೇಶದ 60 ಮಿಲಿಯನ್ ಜನರ ಪೈಕಿ ಶೇ.30 ರಷ್ಟು ಅಂದರೆ 16 ಮಿಲಿಯನ್ ಜನರು ಕೊರೊನಾ ಲಸಿಕೆ ಪಡೆದಿದ್ದಾರೆ.
ಕೋವಿಡ್-19 ಲಸಿಕೆಯ ಎರಡೂ ಡೋಸ್ಗಳನ್ನು ಪಡೆದವರು ಶೈಕ್ಷಣಿಕ ಸಂಸ್ಥೆಗಳಲ್ಲಿ ಹೊರತುಪಡಿಸಿ ಉಳಿದ ಸ್ಥಳಗಳಲ್ಲಿ ಮಾಸ್ಕ್ ಹಾಕಬೇಕಿಲ್ಲ ಎಂದು ಅಮೆರಿಕ ಹೇಳಿದ್ದರೆ, ಕನಿಷ್ಠ ಒಂದು ಡೋಸ್ ಪಡೆದವರು ಸಹ ಜುಲೈ ತಿಂಗಳಿನಿಂದ ಹೊರಾಂಗಣದಲ್ಲಿ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ದಕ್ಷಿಣ ಕೊರಿಯಾ ಸರ್ಕಾರ ತನ್ನ ಪ್ರಜೆಗಳಿಗೆ ಸೂಚಿಸಿದೆ.