ಮಾಸ್ಕೋ (ರಷ್ಯಾ): ಭಾರತದಿಂದ ಆಯ್ಕೆಯಾಗಿದ್ದ ನಾಲ್ವರು ಗಗನಯಾತ್ರಿಗಳು ರಷ್ಯಾದ ಗ್ಯಾಗರಿನ್ ತರಬೇತಿ ಕೇಂದ್ರದಲ್ಲಿ ಒಂದು ವರ್ಷದ ತರಬೇತಿ ಪೂರ್ಣಗೊಳಿಸಿದ್ದಾರೆ.
ಗಗನಯಾತ್ರಿಗಳನ್ನು ಬಾಹ್ಯಾಕಾಶ ನೌಕೆ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿ ಗಗನಯಾನ ಮಿಷನ್ದ್ದಾಗಿದೆ. ಗ್ಲಾವ್ಕೋಸ್ಮೋಸ್ನೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ಗಗನಯಾತ್ರಿಗಳ ತರಬೇತಿಗಾಗಿ 2019ರ ಜೂನ್ 27ರಂದು ಒಪ್ಪಂದಕ್ಕೆ ಸಹಿ ಹಾಕಿತ್ತು. ಗಗನಯಾನ ಯೋಜನೆಗೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 10,000 ಕೋಟಿ ರೂ. ಮೀಸಲಿಟ್ಟಿದೆ.
ಇದನ್ನೂ ಓದಿ: ದಿ.ಬಂಗಬಂಧುಗೆ 'ಗಾಂಧಿ ಶಾಂತಿ ಪ್ರಶಸ್ತಿ' ನೀಡಿದ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ ಬಾಂಗ್ಲಾ ಸರ್ಕಾರ
ಒಪ್ಪಂದದಂತೆ ಗ್ರೂಪ್ ಕ್ಯಾಪ್ಟನ್, ವಿಂಗ್ ಕಮಾಂಡರ್ಗಳು ಸೇರಿ ಭಾರತೀಯ ವಾಯುಪಡೆಯ ನಾಲ್ಕು ಪೈಲಟ್‌ಗಳನ್ನು ಬಾಹ್ಯಾಕಾಶ ಪ್ರಯಾಣ ಮತ್ತು ಇತರ ತರಬೇತಿಗಾಗಿ ಮಾಸ್ಕೋದಲ್ಲಿರುವ ಗ್ಯಾಗರಿನ್ ಗಗನಯಾತ್ರಿ ತರಬೇತಿ ಕೇಂದ್ರ (ಜಿಸಿಟಿಸಿ)ಗೆ ಕಳುಹಿಸಲಾಗಿತ್ತು. 2020ರ ಫೆಬ್ರವರಿ 10ರಂದು ತರಬೇತಿ ಪ್ರಾರಂಭವಾಗಿತ್ತು. ಆದರೆ, ಕೋವಿಡ್ನಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ತರಬೇತಿ 2020ರ ಮೇ ತಿಂಗಳಿನಿಂದ ಮತ್ತೆ ಆರಂಭವಾಗಿತ್ತು.
ತರಬೇತಿ ಪೂರ್ಣಗೊಳಿಸಿದ ಭಾರತೀಯ ಗಗನಯಾತ್ರಿಗಳನ್ನು ನಾವು ಭೇಟಿಯಾಗಿದ್ದೇವೆ. ಭವಿಷ್ಯದ ದ್ವಿಪಕ್ಷೀಯ ಬಾಹ್ಯಾಕಾಶ ಯೋಜನೆಗಳ ಬಗ್ಗೆ ನಾವು ಭಾರತೀಯ ರಾಯಭಾರಿಯೊಂದಿಗೆ ಚರ್ಚಿಸಿದ್ದೇವೆ ಎಂದು ರಷ್ಯಾದ ರಾಜ್ಯ ಬಾಹ್ಯಾಕಾಶ ನಿಗಮದ ಮುಖ್ಯಸ್ಥ ಡಿಮಿಟ್ರಿ ರೋಗೊಜಿನ್ ಹೇಳಿದ್ದಾರೆ.