ಲಂಡನ್: ಭಾರತ ಹಾಗೂ ಪಾಕಿಸ್ತಾನದ ನಡುವಿನ ಹೈದರಾಬಾದ್ ನಿಜಾಮರ ಕಾಲದ 35 ಮಿಲಿಯನ್ ಪೌಂಡ್ ಕುರಿತಾಗಿ ಉಂಟಾಗಿರುವ ವ್ಯಾಜ್ಯ ಇದೀಗ ಲಂಡನ್ ಕೋರ್ಟ್ನಲ್ಲಿ ಕೊನೆಯ ಹಂತ ತಲುಪಿದೆ.
ಲಂಡನ್ ಬ್ಯಾಂಕ್ನಲ್ಲಿರುವ ಹತ್ತು ಮಿಲಿಯನ್ ಹಾಗೂ ಒಂಭತ್ತು ಶಿಲ್ಲಿಂಗ್ಗಾಗಿ ಹೈದರಾಬಾದ್ ನಿಜಾಮರ ಎಂಟನೇ ವಂಶಸ್ಥ ಪ್ರಿನ್ಸ್ ಮುಕಾರಮ್ ಝಾ ಹಾಗೂ ಈತನ ಕಿರಿಯ ಸಹೋದರ ಮುಫಾಕಮ್ ಝಾ 35 ಮಿಲಿಯನ್ ಪೌಂಡ್ಗಾಗಿ ಕೋರ್ಟ್ ಮೊರೆ ಹೋಗಿದ್ದರು.
1947ರ ಭಾರತ ಹಾಗೂ ಪಾಕಿಸ್ತಾನ ವಿಭಜನೆಯ ವೇಳೆ ಹೈದರಾಬಾದ್ ನಿಜಾಮರು ತಮಗೆ ಸೇರಿದ್ದ ಹಣವನ್ನು ಲಂಡನ್ ಬ್ಯಾಂಕ್ನಲ್ಲಿ ಠೇವಣಿ ಇರಿಸಿದ್ದರು.
ನಿಜಾಮ್ ವಂಶಸ್ಥರ ಕಾನೂನು ಹೋರಾಟಕ್ಕೆ ಭಾರತ ಸರ್ಕಾರವೂ ಬೆಂಬಲ ಸೂಚಿಸಿತ್ತು. ಆದರೆ ಅತ್ತ ಪಾಕಿಸ್ತಾನ ಈ ಮೊತ್ತ ತಮಗೆ ಸೇರಬೇಕು ಎಂದು ಕೋರ್ಟ್ನಲ್ಲಿ ತನ್ನ ವಾದ ಮಂಡಿಸಿತ್ತು. ಈ ಮೂಲಕ ಈ ವ್ಯಾಜ್ಯ ಎರಡು ದೇಶಗಳ ನಡುವಿನ ಹೋರಾಟವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು.
"ನಿಜಾಮರ ಎಂಟನೇ ವಂಶಸ್ಥರ ದಶಕಗಳ ದೀರ್ಘ ಕಾನೂನು ಹೋರಾಟ ಸದ್ಯ ಅಂತಿಮ ಹಂತ ತಲುಪಿದೆ. ಹಣ ನಿಜಾಮರಿಗೆ ಸೇರದಂತೆ ಕಳೆದ 70 ವರ್ಷದಿಂದ ಪಾಕಿಸ್ತಾನ ತಕರಾರು ಎತ್ತಿತ್ತು. ಇತ್ತೀಚೆಗೆ ಮುಕ್ತಾಯವಾದ ವಿಚಾರಣೆಯಲ್ಲಿ ಮೊತ್ತ ನಿಜಾಮರಿಗೆ ಸೇರುವ ಆಶಾವಾದ ಮೂಡಿದೆ" ಎಂದು ನಿಜಾಮ್ ಪರ ವಕೀಲ ಪೌಲ್ ಹೆವಿಟ್ ಭರವಸೆ ವ್ಯಕ್ತಪಡಿಸಿದ್ದಾರೆ.
ಜಸ್ಟೀಸ್ ಮಾರ್ಕಸ್ ಸ್ಮಿತ್ ಮುಖ್ಯ ನ್ಯಾಯಮೂರ್ತಿಯಾಗಿದ್ದು, ಎರಡು ವಾರಗಳ ಕಾಲ ವಾದ-ವಿವಾದ ನಡೆದಿದೆ. ಸದ್ಯ ವಿಚಾರಣೆ ಅಂತ್ಯವಾಗಿದ್ದು ಮುಂದಿನ ಆರು ವಾರದ ಒಳಗಾಗಿ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆಯಿದೆ.