ಸುಮಿ(ಉಕ್ರೇನ್): ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದ್ದು, ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಲಾಗಿದೆ. ಆದರೂ ಕೂಡಾ ಕೆಲವೊಂದು ಪ್ರಾಂತ್ಯಗಳಲ್ಲಿ ಕದನ ವಿರಾಮ ಬ್ರೇಕ್ ಮಾಡಲಾಗಿದೆ. ಯುದ್ಧ ತೀವ್ರಗೊಂಡಿರುವ ಸುಮಿ ನಗರದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಉಕ್ರೇನ್ನ ಈಶಾನ್ಯ ಭಾಗದಲ್ಲಿರುವ ಸುಮಿಯಲ್ಲಿ ಸುಮಾರು 600 ಮಂದಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದು, ವಿಡಿಯೋವೊಂದನ್ನು ಮಾಡಿ, ಆ ವಿಡಿಯೋದಲ್ಲಿ 'ನಮಗೇನಾದರೂ ಅಪಾಯ ಸಂಭವಿಸಿದರೆ, ಅದಕ್ಕೆ ಸರ್ಕಾರವೇ ಹೊಣೆ ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಯುದ್ಧ ವಲಯದ ಪ್ರದೇಶದಲ್ಲಿರುವ ವಿದ್ಯಾರ್ಥಿಗಳು ಶೆಲ್ ಮತ್ತು ಬಾಂಬ್ ದಾಳಿಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅವರೆಲ್ಲರೂ ಸುಮಿ ವೈದ್ಯಕೀಯ ವಿಶ್ವವಿದ್ಯಾಲಯದವರಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾಯುವುದು ಸಾಧ್ಯವಿಲ್ಲ: ವಿಡಿಯೋದಲ್ಲಿ 'ಇಂದು ಯುದ್ಧದ ಹತ್ತನೇ ದಿನ. ರಷ್ಯಾ ಎರಡು ನಗರಗಳಲ್ಲಿ ಕದನ ವಿರಾಮ ಘೋಷಿಸಿದೆ ಎಂದು ನಾವು ತಿಳಿದುಕೊಂಡಿದ್ದೇವೆ. ನಾವಿರುವ ಸುಮಿ ನಗರದಿಂದ 600 ಕಿಲೋಮೀಟರ್ ದೂರದಲ್ಲಿ ಮರಿಯುಪೋಲ್ ನಗರವಿದ್ದು, ಅಲ್ಲಿ ಕದನ ವಿರಾಮ ಘೋಷಿಸಲಾಗಿದೆ. ಬೆಳಗ್ಗೆಯಿಂದ ಬಾಂಬ್ ಸ್ಫೋಟ, ಏರ್ಜೆಟ್ಗಳ ಓಡಾಟವನ್ನು ನಾವು ಕೇಳುತ್ತಿದ್ದೇವೆ. ಈವರೆಗೂ ನಾವು ಕಾದಿದ್ದು, ಇನ್ನು ಮುಂದೆ ಕಾಯಲು ಸಾಧ್ಯವಿಲ್ಲ. ನಾವು ನಮ್ಮ ಪ್ರಾಣವನ್ನು ಪಣಕ್ಕಿಟ್ಟು, ಗಡಿಯತ್ತ ಸಾಗುತ್ತಿದ್ದೇವೆ. ನಮಗೆ ಏನಾದರೂ ಸಂಭವಿಸಿದರೆ, ಸರ್ಕಾರವೇ ಹೊಣೆಯಾಗಬೇಕು ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೇಶ ರಕ್ಷಣೆಗೆ ನಾನೂ ಸಿದ್ಧ: ಮಾರ್ಕೆಟಿಂಗ್ ಕೆಲಸ ಬಿಟ್ಟು ಉಕ್ರೇನ್ ರಕ್ಷಣೆಗೆ ನಿಂತ 26 ವರ್ಷದ ಯುವತಿ!
ಗಡಿಯತ್ತ ಪ್ರಯಾಣ ಬೆಳೆಸುವ ಮುನ್ನ, ಇದು ನಮ್ಮ ಕೊನೆಯ ವಿಡಿಯೋ ಎಂದು ಅವರು ಹೇಳಿದ್ದಾರೆ. ಜೊತೆಗೆ 'ರಷ್ಯಾ ಗಡಿಯನ್ನು ನಮಗೆ ತೆರೆಯಲಾಗಿದೆ. ಆದ್ದರಿಂದ ನಾವು ತೆರಳುತ್ತಿದ್ದೇವೆ. ನಮಗಾಗಿ ಪ್ರಾರ್ಥಿಸಿ, ನಮಗೆ ಇದೀಗ ನಮ್ಮ ಸರ್ಕಾರ ಬೇಕು ಎಂದಿದ್ದು, ಕೊನೆಗೆ 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗಿದ್ದಾರೆ.