ಜಿನೇವಾ (ಸ್ವಿಟ್ಜರ್ಲ್ಯಾಂಡ್): ಕೆಲವು ದೇಶಗಳು ಕೊರೊನಾ ವೈರಸ್ ಲಸಿಕೆಗಳ ಶೇಖರಿಸಿಡುವಲ್ಲಿ ಕೋಲ್ಡ್ ಸ್ಟೋರೇಜ್ ವೆಚ್ಚವು ಅಡ್ಡಿಯಾಗಬಾರದು, ಅವುಗಳ ನಿರ್ವಹಣೆಯ ವೆಚ್ಚವೇ ಹೊರೆಯಾಗಿ ಶೇಖರಣೆಯಲ್ಲಿ ನಿರುತ್ಸಾಹತೋರಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ರೋಗನಿರೋಧಕ ಮತ್ತು ಜೈವಿಕ ವಿಭಾಗಗಳ ನಿರ್ದೇಶಕಿ ಕೇಟ್ ಒಬ್ರಿಯೆನ್ ಹೇಳಿದ್ದಾರೆ.
ಪ್ರತಿ ದೇಶವು ತುಂಬಾನೇ ಶ್ರಮವಹಿಸಿ ಕೆಲಸ ಮಾಡಬೇಕಿದೆ. ಕೊರೊನಾ ಲಸಿಕೆಗಾಗಿ ನೂತನ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕಿದೆ. ಅಲ್ಲದೇ ಕೊರೊನಾ ಲಸಿಕೆ ಸಂರಕ್ಷಿಸಿಡಲು ಅಲ್ಟ್ರಾ ಕೋಲ್ಡ್ ಚೈನ್ ವ್ಯವಸ್ಥೆ ಹೊಂದಿರಬೇಕಿದೆ. ಇನ್ನು ಈ ಲಸಿಕೆ ನೀಡಬೇಕಾದ ಜನಸಂಖ್ಯೆಯ ಮಿತಿ ಗುರುತಿಸಿ ಆಯ್ದ ಭಾಗಗಳನ್ನು ನಿರ್ಧರಿಸಬೇಕಾಗುತ್ತದೆ ಎಂದು ವರ್ಚುವಲ್ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೇ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವುರಿಂದ ಕೋಲ್ಡ್ ಸ್ಟೋರೇಜ್ಗಳ ಅಗತ್ಯತೆ ಅಷ್ಟಾಗಿ ಕಾಡುವುದಿಲ್ಲ ಎಂದಿದ್ದಾರೆ.
ನಮ್ಮಲ್ಲಿ ತಂತ್ರಜ್ಞಾನವಿದೆ, ದುರ್ಘಮ ಪ್ರದೇಶಕ್ಕೂ ಲಸಿಕೆ ತಲುಪಿಸಲು ಸಂಪನ್ಮೂಲ ಹಾಗೂ ಅನುಭವವಿದೆ. ಆದ್ದರಿಂದ ನಮಗೆ ಬೇಕಾಗಿರುವುದು ವಿಭಿನ್ನ ಗುಣಲಕ್ಷಣದ ವಿವಿಧ ಲಸಿಕೆಗಳಾಗಿವೆ. ಪ್ರಸ್ತುತ ವಿವಿಧ ದೇಶಗಳು ಲಸಿಕೆಗಳನ್ನು ಕೋಲ್ಡ್ ಸ್ಟೋರೇಜ್ ಮಾಡುವ ಹಂತ ತಲುಪಿವೆ. ಅಂದರೆ ಅವುಗಳನ್ನು ನಿರ್ದಿಷ್ಟ ತಾಪಮಾನದಲ್ಲಿ ಶೇಖರಿಸಿಟ್ಟು ಸಾಗಿಸಬೇಕಾಗಿದೆ ಎಂದಿದ್ದಾರೆ.
ಫಿಜರ್ನ ಎಂಆರ್ಎನ್ಎ ಆಧಾರಿತ ಲಸಿಕೆಯು -70 ಡಿಗ್ರಿ ಸೆಲ್ಸಿಯಸ್ನಲ್ಲಿ ಸಂಗ್ರಹಿಸಿಡುವ ಅಗತ್ಯವಿದೆ. ರಷ್ಯಾದ ಸ್ಪುಟ್ನಿಕ್ ವಿ ಸಲಿಕೆಯು ಕನಿಷ್ಠ -18 ಡಿಗ್ರಿಯಲ್ಲಿ ಸಂಗ್ರಹಿಸಿಡಬೇಕಿದೆ. ಇದಲ್ಲದೇ ಮಡರ್ನಾದ ಎಂಆರ್ಎನ್ಎ ಲಸಿಕೆಯು ಸಾಮಾನ್ಯವಾಗಿ 2-3 ಡಿಗ್ರಿಯಲ್ಲಿ ಸಂಗ್ರಹಿಸಬಹುದು. ಆದರೆ, ಇದನ್ನು ಒಂದು ತಿಂಗಳವರೆಗೆ ಮಾತ್ರ ಸಂಗ್ರಹಿಸಿಡಬಹುದು. ದೀರ್ಘಕಾಲದ ಬಾಳಿಕೆಗಾಗಿ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಿಡಬೇಕಾದ ಅಗತ್ಯವಿದೆ.