ಬರ್ಲಿನ್: ಕೊರೊನಾ ಸೋಂಕನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಜರ್ಮನಿ ತನ್ನ ಲಾಕ್‌ಡೌನ್ ನಿಬಂಧನೆಗಳನ್ನು ಮತ್ತೊಂದು ತಿಂಗಳು ವಿಸ್ತರಿಸಿ ಹೊಸ ನಿರ್ಬಂಧಗಳನ್ನು ವಿಧಿಸಿದೆ.
ದೇಶದ 16 ರಾಜ್ಯಗಳ ಗವರ್ನರ್‌ಗಳೊಂದಿಗೆ ಸುದೀರ್ಘವಾದ ವಿಡಿಯೋ ಕಾನ್ಫರೆನ್ಸ್ ನಂತರ ಮಾತನಾಡಿದ ಜರ್ಮನಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್, ಈ ಹಿಂದೆ ಮಾರ್ಚ್ 28 ರವರೆಗೆ ಹೇರಲು ನಿಗದಿಪಡಿಸಿದ್ದ ನಿರ್ಬಂಧಗಳು ಈಗ ಏಪ್ರಿಲ್ 18 ರವರೆಗೆ ಜಾರಿಯಲ್ಲಿರುತ್ತವೆ ಎಂದು ಘೋಷಿಸಿದ್ದಾರೆ.
ರಜಾದಿನಗಳಲ್ಲಿ ವಿದೇಶದಲ್ಲಿ ಪ್ರಯಾಣಿಸುವ ಜರ್ಮನ್ರ ಸಂಖ್ಯೆ ಹೆಚ್ಚಿದ್ದು, ಜರ್ಮನಿಗೆ ವಿಮಾನ ಹತ್ತುವ ಮೊದಲು ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವ ಕ್ರಮಕ್ಕೆ ಎಲ್ಲಾ ರಾಜ್ಯಗಳ ಗವರ್ನರ್ಗಳು ಒಪ್ಪಿಗೆ ನೀಡಿದ್ದಾರೆ.
ಈ ಹಿಂದೆ ಘೋಷಿಸಿದ್ದ ಲಾಕ್ಡೌನ್ನಿಂದ ವಿನಾಯಿತಿ ಪಡೆದಿದ್ದ ಪುಸ್ತಕ ಮಳಿಗೆಗಳು ಮತ್ತು ಉದ್ಯಾನಗಳಿಗೆ ಸರ್ಕಾರವು ಪುನಃ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಜರ್ಮನ್ ಶಾಲೆಗಳಲ್ಲಿನ ಎಲ್ಲ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಉಚಿತ ಕೋವಿಡ್ ಪರೀಕ್ಷೆಗಳನ್ನು ನಡೆಸುವ ಉದ್ದೇಶವನ್ನು ಇಲ್ಲಿನ ಅಧಿಕಾರಿಗಳು ಹೊಂದಿದ್ದಾರೆ. ಜರ್ಮನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೋವಿಡ್ ಲಸಿಕೆ ಪಡೆಯುವುದರಿಂದ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಮಾರ್ಕೆಲ್ ಹೇಳಿದ್ದಾರೆ.
ಇದನ್ನೂ ಓದಿ:ಗಗನಯಾನ ಮಿಷನ್: ರಷ್ಯಾದಲ್ಲಿ ಭಾರತೀಯ ಗಗನಯಾತ್ರಿಗಳ ತರಬೇತಿ ಪೂರ್ಣ