ವಾಷಿಂಗ್ಟನ್: ಚೀನಾ, ಫ್ರಾನ್ಸ್, ರಷ್ಯಾ, ಇಂಗ್ಲೆಂಡ್ ಮತ್ತು ಅಮೆರಿಕ ದೇಶಗಳು ಮುಂದಿನ ದಿನಗಳಲ್ಲಿ ವಿಶ್ವದಲ್ಲಿ ಅಣ್ವಸ್ತ್ರ ದಾಳಿಗಳನ್ನು ನಿಯಂತ್ರಿಸುತ್ತೇವೆ. ಜತೆಗೆ ಪರಸ್ಪರ ಮತ್ತು ಇತರ ದೇಶಗಳ ಮಧ್ಯೆ ಶಸ್ತ್ರಾಸ್ತ್ರಗಳ ಪೈಪೋಟಿಗೆ ಇಳಿಯುವುದಿಲ್ಲ ಎಂದು ಘೋಷಣೆ ಮಾಡಿವೆ.
ಒಂದು ಕಾಲದಲ್ಲಿ ಈ ರಾಷ್ಟ್ರಗಳು ತಾವೇ ನಾಯಕ ಎಂದು ಬಿಂಬಿಸಿಕೊಳ್ಳಲು ಹಾಗೂ ವಿಶ್ವದ ಬಲಶಾಲಿ ರಾಷ್ಟ್ರ ಎಂದು ಗುರುತಿಸಿಕೊಳ್ಳಲು ಪೈಪೋಟಿಗೆ ಇಳಿದಿದ್ದವು. ಆದರೆ ಈಗ ಬದಲಾದ ಕಾಲಘಟ್ಟದಲ್ಲಿ ಇಂತಹದ್ದೊಂದು ಘೋಷಣೆ ಮಾಡಿ, ಪರಮಾಣು ಯುದ್ಧದ ಭೀತಿ ತಪ್ಪಿಸಲು ಮುಂದಾಗಿವೆ.
ಈ ಸಂಬಂಧ ಅಮೆರಿಕ, ಚೀನಾ, ಫ್ರಾನ್ಸ್, ರಷ್ಯಾ ಮತ್ತು ಬ್ರಿಟನ್ ರಾಷ್ಟ್ರಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ. ಶ್ವೇತಭವನ ಈ ಜಂಟಿ ಹೇಳಿಕೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಪರಮಾಣು ಯುದ್ಧವನ್ನು ಗೆಲ್ಲಲಾಗುವುದಿಲ್ಲ ಮತ್ತು ಅಂಥ ಯುದ್ಧಕ್ಕೆ ಕೈಹಾಕುವ ದುಸ್ಸಾಹಸಕ್ಕೆ ಯಾರೂ ಮುಂದಾಗಬಾರದು ಎಂಬುದನ್ನು ದೃಢೀಕರಿಸುತ್ತೇವೆ ಎಂದು ಐದು ರಾಷ್ಟ್ರಗಳು ಘೋಷಿಸಿವೆ ಎಂಬುದನ್ನ ತಿಳಿಸಿದೆ.
ಅಣ್ವಸ್ತ್ರಯುದ್ಧ ಕೊನೆಗೊಳಿಸುವ ಬದ್ಧತೆ ಪ್ರದರ್ಶಿಸಿದ ಪಂಚರಾಷ್ಟ್ರಗಳು
‘‘ಅಣ್ವಸ್ತ್ರ ಶಸ್ತ್ರಾಸ್ತ್ರಗಳ ನಡುವಿನ ಯುದ್ಧ ತಪ್ಪಿಸುವುದು ಮತ್ತು ಇದರಿಂದಾಗುವ ಅಪಾಯಗಳನ್ನು ನಿಯಂತ್ರಿಸುವುದು ತಮ್ಮ ಪ್ರಮುಖ ಜವಾಬ್ದಾರಿಯಾಗಿವೆ ಎಂದು ಐದು ಅಣ್ವಸ್ತ್ರ ರಾಷ್ಟ್ರಗಳು ಘೋಷಿಸಿವೆ. ಅಲ್ಲದೇ ಪರಮಾಣು ಯುದ್ಧವನ್ನು ಎಂದಿಗೂ ಜಯಿಸಲಾಗದು. ಹಾಗಾಗಿ ಅಂಥ ಯುದ್ಧಕ್ಕೆ ಕೈಹಾಕುವ ದುಸ್ಸಾಹಸಕ್ಕೆ ಯಾರೂ ಮುಂದಾಗಬಾರದು ಎಂಬುದು ತಮ್ಮ ದೃಢ ಅಭಿಪ್ರಾಯವಾಗಿದೆ. ಪರಮಾಣು ಬಳಕೆ ದೂರಗಾಮಿ ಪರಿಣಾಮಗಳನ್ನು ಉಂಟು ಮಾಡುತ್ತವೆ. ಹೀಗಾಗಿ ಅಣ್ವಸ್ತ್ರ ಶಸ್ತ್ರಾಸ್ತ್ರಗಳು ರಕ್ಷಣಾತ್ಮಕ ಉದ್ದೇಶಗಳನ್ನು ಪೂರೈಸಬೇಕು. ಆಕ್ರಮಣಶೀಲತೆ ಮತ್ತು ಯುದ್ಧಗಳನ್ನು ತಡೆಯಬೇಕು ಎಂಬುದೇ ಈ ಘೋಷಣೆಯ ಉದ್ದೇಶ ಎಂಬುದನ್ನು ಐದು ರಾಷ್ಟ್ರಗಳ ನಾಯಕರು ಜಂಟಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಂಪೂರ್ಣ ನಿಶಸ್ತ್ರೀಕರಣದತ್ತ ಚಿತ್ತ
ಪರಮಾಣು ಶಸ್ತ್ರಾಸ್ತ್ರ ಸ್ಪರ್ಧೆ ನಿಲ್ಲಿಸುವುದು ಮತ್ತು ಪರಮಾಣು ನಿಶ್ಯಸ್ತ್ರೀಕರಣಕ್ಕೆ ಸಂಬಂಧಿಸಿದಂತೆ ಪರಿಣಾಮಕಾರಿ ಮಾತುಕತೆ ಮುಂದುವರಿಸಲು ಇದೇ ವೇಳೆ ಈ ರಾಷ್ಟ್ರಗಳು ಮುಂದಾಗಿವೆ, ಅಷ್ಟೇ ಅಲ್ಲ ಪರಮಾಣು ಪ್ರಸರಣ ರಹಿತ ಒಪ್ಪಂದ (NPT) ಕಟ್ಟುಪಾಡುಗಳಿಗೆ ನಾವು ಬದ್ಧರಾಗಿದ್ದೇವೆ ಎಂದು ಘೋಷಿಸಿವೆ. ಮುಂದುವರಿದು ಪರಮಾಣು ಶಸ್ತ್ರಾಸ್ತ್ರ ನಿಯಂತ್ರಣಕ್ಕೆ ಕಟ್ಟುನಿಟ್ಟಾದ ಕ್ರಮ ಹಾಗೂ ಸಾಮಾನ್ಯ ಮತ್ತು ಸಂಪೂರ್ಣ ನಿಶಸ್ತ್ರೀಕರಣದ ಒಪ್ಪಂದದತ್ತ ಮುನ್ನಡೆಯುವ ಬದ್ಧತೆಯನ್ನು ಘೋಷಿಸಿಲಾಗಿದೆ.
ಐದು ಪರಮಾಣು ದೇಶಗಳ ನಾಯಕರು ಇಂತಹ ಜಂಟಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲು. ಇದು ಪರಮಾಣು ಯುದ್ಧ ತಡೆಯಲು ವ್ಯಕ್ತಪಡಿಸಿದ ರಾಜಕೀಯ ಇಚ್ಛಾಶಕ್ತಿಯಾಗಿದೆ. ವಿಶ್ವದಲ್ಲಿ ಸ್ಥಿರತೆ ಹಾಗೂ ಅಪಾಯ ಕಡಿಮೆ ಮಾಡಲು ಧ್ವನಿ ನೀಡಿದೆ ಎಂದು ಚೀನಾದ ಉಪ ವಿದೇಶಾಂಗ ಸಚಿವ ಮಾ ಝಾಕ್ಸು ಹೇಳಿದ್ದಾರೆ.