ಅಥೆನ್ಸ್( ಗ್ರೀಸ್) : ಕೋಟ್ಯಂತರ ರೂಪಾಯಿ ನೀಡಿ ಬೆಳಗ್ಗೆಯಷ್ಟೇ ಉದ್ಯಮಿಯೋರ್ವ ಫೆರಾರಿ 488 ಕಾರು ಖರೀದಿ ಮಾಡಿದ್ದು, ಅದರಲ್ಲಿ ಪ್ರಯಾಣ ಬೆಳೆಸುತ್ತಿದ್ದ ವೇಳೆ ಭೀಕರ ಅಪಘಾತಕ್ಕೊಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ. ದುರ್ಘಟನೆ ವೇಳೆ ಕಾರು ಕೂಡ ಹೊತ್ತಿ ಉರಿದಿದೆ. ಗ್ರೀಸ್ನ ರಾಜಧಾನಿ ಅಥೆನ್ಸ್ನ ವೌಲಾದಲ್ಲಿ ಈ ಘಟನೆ ನಡೆದಿದೆ.
ಉದ್ಯಮಿ ಟ್ಜೋರ್ಟ್ಜಿಸ್ ಮೊನೊಯಿಯೊಸ್(45) ಅಪಘಾತದ ವೇಳೆ ಸಾವನ್ನಪ್ಪಿದ್ದಾರೆ. ರೆಸಾರ್ಟ್ ದ್ವೀಪವಾದ ಮೈಕೋನೋಸ್ನಲ್ಲಿ ಬಟ್ಟೆ ಅಂಗಡಿ ಹೊಂದಿರುವ ಇವರು, ಇಂದು ಬೆಳಗ್ಗೆ 3 ಕೋಟಿ ರೂಪಯಿಗೂ ಅಧಿಕ ಮೌಲ್ಯದ ಸ್ಪೋರ್ಟ್ಸ್ ಕಾರು ಫೆರಾರಿ ಖರೀದಿ ಮಾಡಿದ್ದರು.
ಸಂಜೆ ವೇಳೆ ಹೆಂಡತಿ ಜೊತೆ ಅದರಲ್ಲಿ ಪ್ರಯಾಣ ಬೆಳೆಸಿದ್ದು, ಈ ವೇಳೆ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಮರಕ್ಕೆ ಗುದ್ದಿದೆ. ಪರಿಣಾಮ ಉದ್ಯಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಕೂಡ ಬೆಂಕಿಗಾಹುತಿಯಾಗಿದೆ. ಕಾರಿನಲ್ಲಿದ್ದ ಉದ್ಯಮಿ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
2003ರಲ್ಲಿ ಟ್ಜೋರ್ಟ್ಜಿಸ್ ಮೊನೊಯಿಯೊಸ್ ರಿಯಾಲಿಟಿ ಶೋ ದಿ ವಾಲ್ನ ಗ್ರೀಕ್ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದರು. ಘಟನೆಯಲ್ಲಿ ಗಾಯಗೊಂಡಿರುವ ಉದ್ಯಮಿ ಪತ್ನಿಯನ್ನ ಇದೀಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.