ಇಸ್ತಾಂಬುಲ್: ಏಜಿಯನ್ ಸಮುದ್ರದಲ್ಲಿ ಭಾರಿ ಭೂಕಂಪನಕ್ಕೆ ಗ್ರೀಸ್ ಮತ್ತು ಟ್ರರ್ಕಿ ದೇಶಗಳು ತತ್ತರಿಸಿ ಹೋಗಿವೆ. ಭೂಕಂಪದಿಂದಾಗಿ ಅನೇಕ ಕಟ್ಟಡಗಳು ಮತ್ತು ಮನೆಗಳು ನೆಲಸಮವಾಗಿದ್ದು, ನಾಲ್ವರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಹೌದು, ಮಧ್ಯಾಹ್ನ ಸಂಭವಿಸಿದ ಭೂಕಂಪಕ್ಕೆ ಟರ್ಕಿಯ ಇಜ್ಮೀರ್ ಪ್ರದೇಶದಲ್ಲಿ ಅನೇಕ ಕಟ್ಟಡಗಳು ಮತ್ತು ಮನೆಗಳು ಕುಸಿದು ಅಪಾರ ಪ್ರಮಾಣದ ನಷ್ಟವಾಗಿದೆ.
ಇನ್ನು ಟರ್ಕಿಯ ಏಜಿಯಾನ್ ಸಮುದ್ರದ 16.5 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದುವಾಗಿದ್ದು, ರಿಕ್ಟರ್ ಮಾಪಕದಲ್ಲಿ 6.6 ರಷ್ಟು ತೀವ್ರತೆ ದಾಖಲಾಗಿದೆ.
ಈಶಾನ್ಯ ಗ್ರೀಕ್ ದ್ವೀಪದಿಂದ 13 ಕಿಲೋಮೀಟರ್ ದೂರದಲ್ಲಿರುವ ಸಮೋಸ್‌ನಲ್ಲಿ ಭೂಕಂಪ ಕೇಂದ್ರ ಇತ್ತು ಎಂದು ತಿಳಿದು ಬಂದಿದ್ದು, ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆ ದಾಖಲಾಗಿದೆ.
ಕರಾವಳಿ ಪ್ರದೇಶದಲ್ಲಿ ಭೂಕಂಪವಾಗಿರುವುದರಿಂದ ಸಣ್ಣ ಪ್ರಮಾಣದ ಸುನಾಮಿ ಉಂಟಾಗಿದೆ. ಇದರಿಂದಾಗಿ ಸಮುದ್ರದ ತೀರದ ಮನೆಗಳಿಗೆ ನೀರು ನುಗ್ಗಿದ್ದು, ಜನರು ಗಾಬರಿಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ತಂಡ ಬಿಡು ಬಿಟ್ಟಿದ್ದು, ತ್ವರಿಗತಿಯಲ್ಲಿ ರಕ್ಷಣಾ ಕಾರ್ಯಗಳು ಸಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟರ್ಕಿಯಲ್ಲಿ ಮೂರನೇ ದೊಡ್ಡ ನಗರವಾಗಿರುವ ಇಜ್ಮೀರ್ನಲ್ಲಿ ಈ ಭೂಕಂಪನವಾಗಿದೆ. ಇಲ್ಲಿ ಸುಮಾರು 20ಕ್ಕು ಹೆಚ್ಚು ಬಹು ಅಂತಸ್ತಿನ ಕಟ್ಟಡಗಳು ನೆಲಕ್ಕೆ ಉರುಳಿವೆ. ಕೂಡಲೇ ಸ್ಥಳೀಯರು ಸಂತ್ರಸ್ತರ ಸಹಾಯಕ್ಕೆ ದೌಡಾಯಿಸಿ ಅನೇಕ ಜನರನ್ನು ಕಾಪಾಡಿದ್ದಾರೆ. ಮನೆ ಕಳೆದುಕೊಂಡವರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿಲಾಗಿದೆ ಎಂದು ಇಜ್ಮೀರ್ ಮೇಯರ್ ತಿಳಿಸಿದ್ದಾರೆ.
ಭೂಕಂಪನದಿಂದ ಆಗಿರುವ ಹಾನಿ ಬಗ್ಗೆ ವರದಿ ಸಲ್ಲಿಸುವಂತೆ ಇಜ್ಮೀರ್ ರಾಜ್ಯಪಾಲರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ.