ಬ್ರಸ್ಸೇಲ್ಸ್: ಬೆಲ್ಸಿಯಂ ರಾಜಧಾನಿ ಬ್ರಸ್ಸೇಲ್ಸ್ನಲ್ಲಿ ನ್ಯಾಟೋ ರಾಷ್ಟ್ರಗಳ ನಾಯಕರ ತುರ್ತು ಸಭೆ ನಡೆಯಿತು. ಈ ಮಹತ್ವದ ಸಭೆಯಲ್ಲಿ ಭಾಗಿಯಾದ ಅಮೆರಿಕ ಅಧ್ಯಕ್ಷ ಜೋ ಬೈಡನ್, ರಷ್ಯಾ ಜಿ-20 ಯಿಂದ ಹೊರ ಬರಬೇಕು ಎಂದು ಒತ್ತಾಯಿಸಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವ ಹಾಗೂ ಸತತ ಒಂದು ತಿಂಗಳಿಂದ ದಾಳಿ ಮುಂದುವರಿಸಿರುವ ಹಿನ್ನೆಲೆಯಲ್ಲಿ ನ್ಯಾಟೋ ರಾಷ್ಟ್ರಗಳ ತುರ್ತು ಸಭೆ ನಡೆಯಿತು.
ಈ ಮಹತ್ವದ ಸರಣಿ ಸಭೆಗಳಲ್ಲಿ ಭಾಗಿಯಾದ ಅಮೆರಿಕ ಅಧ್ಯಕ್ಷ ಜೋ ಬೈಡನ್, ನಂತರ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ, ರಷ್ಯಾ ಜಿ- 20 ರಾಷ್ಟ್ರಗಳ ಒಕ್ಕೂಟದಿಂದ ಹೊರ ಹೋಗುವಂತೆ ಒತ್ತಾಯಿಸಿದರು. ಜಿ- 20 ಒಕ್ಕೂಟ ಪ್ರಮುಖ ಜಾಗತಿಕ ಸಮಸ್ಯೆಗಳ ಮೇಲೆ ಕೆಲಸ ಮಾಡುವ ಅಂತರ್ ಸರ್ಕಾರಿ ವೇದಿಕೆಯಾಗಿದೆ. ಇಂತಹ ಸಂಘಟನೆಯಲ್ಲಿ ರಷ್ಯಾ ಇರುವುದು ಉತ್ತಮವಲ್ಲ. ಹೀಗಾಗಿ ಜಿ-20 ಯಿಂದ ರಷ್ಯಾವನ್ನು ಕಿತ್ತೊಗೆಯಬೇಕು ಎಂದು ಬೈಡನ್ ಒತ್ತಾಯಿಸಿದರು.
ಈ ವಿಚಾರವನ್ನು ನ್ಯಾಟೋ ರಾಷ್ಟ್ರಗಳ ಸದಸ್ಯ ರಾಷ್ಟ್ರಗಳ ನಾಯಕರೊಂದಿಗೆ ಪ್ರಸ್ತಾಪಿಸಿದರು. ರಷ್ಯಾವನ್ನು ಜಿ-20 ಗುಂಪಿನಿಂದ ತೆಗೆದು ಹಾಕುವ ಬಗ್ಗೆ ಮೊದಲ ಆದ್ಯತೆ ನೀಡುವುದಾಗಿ ಬೈಡನ್ ಇದೇ ವೇಳೆ ಘೋಷಿಸಿದರು. ಆದರೆ, ಇದಕ್ಕೆ ಇಂಡೋನೇಷ್ಯಾ ಸೇರಿದಂತೆ ಇತರ ರಾಷ್ಟ್ರಗಳು ಒಪ್ಪುವುದು ಕಷ್ಟ ಎನ್ನಲಾಗಿದೆ.
ಇನ್ನು ರಷ್ಯಾ ಉಕ್ರೇನ್ ಮೇಲಿನ ದಾಳಿಯನ್ನ ಮತ್ತಷ್ಟು ತೀವ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಹಾಗೂ ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ವಿರುದ್ಧ ಮತ್ತಷ್ಟು ನಿರ್ಬಂಧಗಳನ್ನು ಘೋಷಿಸಿವೆ. ಇದೇ ವೇಳೆ, ಉಕ್ರೇನ್ ಬೆಂಬಲಕ್ಕೆ ನಿಂತಿರುವ ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳು ಮಾನವೀಯ ನೆರವಿನ ಪ್ರತೀಜ್ಞೆ ಮಾಡಿವೆ.
ಇದನ್ನು ಓದಿ:ಉಕ್ರೇನ್ ಮೇಲೆ ರಷ್ಯಾ 'ರಂಜಕ' ದಾಳಿ?: ನ್ಯಾಟೋದಿಂದ ಇನ್ನಷ್ಟು ನೆರವಿಗೆ ಝೆಲೆನ್ಸ್ಕಿ ಮನವಿ