ವಿಯೆನ್ನಾ (ಆಸ್ಟ್ರಿಯಾ) : ಸೋಮವಾರದಿಂದ ಲಸಿಕೆ ಹಾಕಿಸಿಕೊಳ್ಳದವರಿಗೆ ಲಾಕ್‌ಡೌನ್ ವಿಧಿಸಿ ಆಸ್ಟ್ರಿಯಾ ಸರ್ಕಾರ (Lockdown in Austria) ಭಾನುವಾರ ಆದೇಶಿಸಿದೆ. "ಈ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ಭಾರವಾದ ಹೃದಯದಿಂದ ನಿರ್ಧರಿಸಿದ್ದೇವೆ" ಎಂದು ಆಸ್ಟ್ರಿಯಾದ ಚಾನ್ಸೆಲರ್ ಅಲೆಕ್ಸಾಂಡರ್ ಶಾಲೆನ್‌ಬರ್ಗ್ ಭಾನುವಾರ ನಡೆದ ಕ್ಯಾಬಿನೆಟ್ ಸಭೆಯ ನಂತರ ಹೇಳಿದರು.
ಸ್ಚಾಲೆನ್‌ಬರ್ಗ್ ಪ್ರಕಾರ, 12 ವರ್ಷಕ್ಕಿಂತ ಮೇಲ್ಪಟ್ಟ ಲಸಿಕೆ ಹಾಕಿಸಿಕೊಳ್ಳದ ವ್ಯಕ್ತಿಗಳು ಕೆಲಸ, ಶಾಪಿಂಗ್ ಅಥವಾ ವ್ಯಾಯಾಮದಂತಹ ಮೂಲಭೂತ ಚಟುವಟಿಕೆಗಳನ್ನು ಹೊರತುಪಡಿಸಿ ತಮ್ಮ ಮನೆಗಳನ್ನು ತೊರೆಯುವುದನ್ನು ನಿಷೇಧಿಸಲಾಗಿದೆ.
ಆದರೆ, 12 ವರ್ಷದೊಳಗಿನವರಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಲಾಕ್‌ಡೌನ್ ಪ್ರಸ್ತುತ 10 ದಿನಗಳವರೆಗೆ ಸೀಮಿತವಾಗಿದೆ. 8.9 ಮಿಲಿಯನ್ ಜನಸಂಖ್ಯೆ ಹೊಂದಿರುವ ಆಸ್ಟ್ರಿಯಾದದಲ್ಲಿ ಲಸಿಕೆ ಹಾಕಿಸಿಕೊಳ್ಳದಿರುವ 2 ಮಿಲಿಯನ್ ಆಸ್ಟ್ರಿಯನ್‌ಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.
ಆಸ್ಟ್ರಿಯಾದಲ್ಲಿ 65 ಪ್ರತಿಶತ ನಾಗರಿಕರು ಪ್ರಸ್ತುತ ಸಂಪೂರ್ಣವಾಗಿ ಲಸಿಕೆ (Corona Vaccination in Austria) ಹಾಕಿಸಿಕೊಂಡಿದ್ದಾರೆ. ವ್ಯಾಕ್ಸಿನೇಷನ್ ದರವು ಪಶ್ಚಿಮ ಯುರೋಪಿಯನ್ ರಾಷ್ಟ್ರಗಳಲ್ಲಿ ಅತ್ಯಂತ ಕಡಿಮೆಯಾಗಿದೆ.
ಶನಿವಾರದಂದು 13,152 ಹೊಸ ಪ್ರಕರಣಗಳು ವರದಿಯಾದ ದಾಖಲೆಯ ನಂತರ ಆಸ್ಟ್ರಿಯಾದಲ್ಲಿ ಭಾನುವಾರ 11,552 ಹೊಸ ಪ್ರಕರಣಗಳು (Corona cases in Austria) ದಾಖಲಾಗಿವೆ. ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ, ಆಸ್ಟ್ರಿಯಾದಲ್ಲಿ 11,700ಕ್ಕೂ ಹೆಚ್ಚು ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಓದಿ: CBI, ED ಅಧಿಕಾರಾವಧಿ 5 ವರ್ಷ ವಿಸ್ತರಣೆಗೆ ಕೇಂದ್ರದಿಂದ ಸುಗ್ರೀವಾಜ್ಞೆ