ಬೀಜಿಂಗ್(ಚೀನಾ) : ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇಂದು ಕೊರೊನಾ ವೈರಸ್ ಪೀಡಿತ ವುಹಾನ್ ನಗರಕ್ಕೆ ಮೊದಲ ಬಾರಿಗೆ ಭೇಟಿ ನೀಡಿದರು.
ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ನಿಂದ ಹೊಸದಾಗಿ 17 ಜನ ಸಾವನ್ನಪ್ಪಿದ್ದು, ದೇಶದಲ್ಲಿ ಒಟ್ಟಾರೆ 3,136 ಮಂದಿ ಅಸುನೀಗಿದ್ದಾರೆ ಎಂದು ಚೀನಾದ ಆರೋಗ್ಯ ಪ್ರಾಧಿಕಾರ ಘೋಷಿಸಿದೆ.
ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಪ್ರಧಾನ ಕಾರ್ಯದರ್ಶಿ ಆಗಿರುವ ಕ್ಸಿ, ಹುಬೈ ಪ್ರಾಂತ್ಯ ಮತ್ತು ಅದರ ರಾಜಧಾನಿ ವುಹಾನ್‌ನಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಗಳ ಪರಿಶೀಲನೆಗಾಗಿ ಕೊರೊನಾ ಕೇಂದ್ರಬಿಂದು ವುಹಾನ್‌ಗೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಭೇಟಿ ವೇಳೆ ವೈದ್ಯಕೀಯ ಕಾರ್ಯಕರ್ತರು, ಮಿಲಿಟರಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸ್ವಯಂ ಸೇವಕರಿಗೆ ಕೃತಜ್ಞತೆ ಸಲ್ಲಿಸಿದರು.
ಚೀನಾದ ಅಧಿಕಾರಿಗಳು ಸೋಮವಾರ ನೊವೆಲ್ ಕೊರೊನಾ ವೈರಸ್ ಸೋಂಕಿನ 19 ಹೊಸ ಪ್ರಕರಣಗಳು ಮತ್ತು 17 ಸಾವುಗಳನ್ನು ವರದಿ ಮಾಡಿದ್ದಾರೆ.17 ಹೊಸ ಸಾವುಗಳು ಹುಬೈ ಪ್ರಾಂತ್ಯ ಮತ್ತು ಅದರ ರಾಜಧಾನಿ ವುಹಾನ್‌ನಲ್ಲಿ ಸಂಭಸಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ತಿಳಿಸಿದೆ.
ಸೋಮವಾರದ ಅಂತ್ಯದ ವೇಳೆಗೆ ಒಟ್ಟಾರೆ ದೃಢಪಡಿಸಿದ ಪ್ರಕರಣಗಳು 80,754 ತಲುಪಿದೆ. ಇದರಲ್ಲಿ ಕಾಯಿಲೆಯಿಂದ ಸಾವನ್ನಪ್ಪಿದ್ದು 3,136 ಜನರು, 17,721 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 59,897 ರೋಗಿಗಳು ಚೇತರಿಸಿಕೊಂಡ ನಂತರ ಬಿಡುಗಡೆಯಾಗಿದ್ದಾರೆ ಎಂದು ಎನ್‌ಎಚ್‌ಸಿ ತಿಳಿಸಿದೆ.