ಕಾಬೂಲ್(ಅಫ್ಘಾನಿಸ್ತಾನ) : ಜಗತ್ತಿನ ಗಮನ ಸೆಳೆದಿರುವ ಅಫ್ಘಾನಿಸ್ತಾನ ತಾಲಿಬಾನ್ ಹಿಡಿತಕ್ಕೆ ಒಳಪಟ್ಟಿದೆ. ಕೆಲವೇ ದಿನಗಳಲ್ಲಿ ಹೊಸ ಸರ್ಕಾರ ರಚನೆಯಾಗುವ ನಿರೀಕ್ಷೆಗಳನ್ನೂ ಇಟ್ಟುಕೊಳ್ಳಲಾಗಿದೆ. ಈ ಬೆನ್ನಲ್ಲೇ ಅಲ್ಲಿನ ಕೆಲವು ಮಹಿಳಾ ಹಕ್ಕುಗಳ ಕಾರ್ಯಕರ್ತರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
ಮಹಿಳಾ ಕಾರ್ಯಕರ್ತರ ಗುಂಪೊಂದು ಕಾಬೂಲ್ನಲ್ಲಿರುವ ರಾಷ್ಟ್ರಪತಿ ಭವನದತ್ತ ಮೆರವಣಿಗೆ ನಡೆಸಲು ಮುಂದಾಗಿದ್ದು, ಇದನ್ನು ತಾಲಿಬಾನ್ ಪಡೆಗಳು ತಡೆದಿವೆ. ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗ ಮಾಡಲಾಗಿದೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.
ಶುಕ್ರವಾರವಷ್ಟೇ ಮಹಿಳೆಯರ ಪ್ರತಿಭಟನೆ ಆರಂಭವಾಗಿದ್ದು, ಎರಡನೇ ದಿನದ ಪ್ರತಿಭಟನೆ ವೇಳೆ ತಾಲಿಬಾನ್ ಪಡೆಗಳು ಅಡ್ಡಿಪಡಿಸಿವೆ. ಮುಂದೆ ರಚನೆಯಾಗುವ ಸರ್ಕಾರದಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡಬೇಕೆಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ.
ತಾಲಿಬಾನ್ ಸರ್ಕಾರವು ಮಹಿಳಾ ಹಕ್ಕುಗಳನ್ನು ಗೌರವಿಸಬೇಕು, ಹೊಸ ಸರ್ಕಾರದಲ್ಲಿ ಮಹಿಳೆಯರನ್ನು ಪಾಲುದಾರರನ್ನಾಗಿ ಮಾಡಬೇಕೆಂದು ಈ ವೇಳೆ ಘೋಷಣೆಗಳನ್ನು ಕೂಗಲಾಗಿದ್ದು, ತಾಲಿಬಾನ್ ಪಡೆಗಳು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗಿಸಿ, ಪ್ರತಿಭಟನೆಗೆ ಅಡ್ಡಿಯುಂಟು ಮಾಡಿದೆ.
ಇದಕ್ಕೂ ಮುನ್ನ, ತಾಲಿಬಾನಿಗಳು ಅಫ್ಘನ್ ಮೇಲೆ ಹಿಡಿತ ಸಾಧಿಸಿದ ನಂತರ ಮೊದಲ ಬಾರಿಗೆ ಹತ್ತಾರು ಮಹಿಳೆಯರು ಪಶ್ಚಿಮ ಅಫ್ಘನ್ ನಗರವಾದ ಹೆರಾತ್‌ನಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದರು.
ಇದನ್ನೂ ಓದಿ: ದನದ ಕೊಟ್ಟಿಗೆಗೆ ಕರೆದೊಯ್ದು ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ