ವುಹಾನ್: ಕೊರೊನಾ ವೈರಸ್ ಮೂಲದ ಬಗ್ಗೆ ತನಿಖೆ ನಡೆಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಹೆಚ್‌ಒ) ತಜ್ಞರು ನಿನ್ನೆ ಚೀನಾದ ಮೊದಲ ಕೋವಿಡ್ ಸೋಂಕಿತ ದಾಖಲಾಗಿ ಚಿಕಿತ್ಸೆ ಪಡೆದಿದ್ದ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
2019ರ ಡಿಸೆಂಬರ್ನಲ್ಲಿ ಮೊದಲ ಕೋವಿಡ್ ಪ್ರಕರಣ ಚೀನಾದ ವುಹಾನ್ನಲ್ಲಿ ವರದಿಯಾಗಿತ್ತು. ಇದರ ಮೂಲದ ಬಗ್ಗೆ ತನಿಖೆ ನಡೆಸುವ ಸಲುವಾಗಿ ವುಹಾನ್ ಭೇಟಿಯಲ್ಲಿರುವ ಡಬ್ಲ್ಯುಹೆಚ್‌ಒ ತಜ್ಞರು, ಚೀನಾದ ಅಧಿಕಾರಿಗಳೊಂದಿಗೆ ತಮ್ಮ ಸತ್ಯಶೋಧನಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಿನ್ನೆಯವರೆಗೆ ಅಂದರೆ ಚೀನಾಗೆ ಬಂದ 14 ದಿನಗಳ ವರೆಗೆ ಡಬ್ಲ್ಯುಹೆಚ್‌ಒ ತಂಡವು ಕ್ವಾರಂಟೈನ್ನಲ್ಲಿತ್ತು. ಈ ವೇಳೆಯಲ್ಲಿ ಚೀನಾ ಅಧಿಕಾರಿಗಳೊಂದಿಗೆ ವರ್ಚುಯಲ್ ಸಭೆಗಳನ್ನು ನಡೆಸುತ್ತಿತ್ತು.
ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲಿ ಗಾಂಧಿ ಪ್ರತಿಮೆ ವಿರೂಪ: ಭಾರತದ ಖಂಡನೆ
ಕ್ವಾರಂಟೈನ್ನಿಂದ ಮುಕ್ತರಾಗಿರುವ ತಜ್ಞರು ನಿನ್ನೆ ತಮ್ಮ ಕಾರ್ಯಾಚರಣೆಯ ಭಾಗವಾಗಿ ಒಂದು ವರ್ಷದ ಹಿಂದೆ ಸೋಂಕಿತರು ದಾಖಲಾಗಿದ್ದ ಆಸ್ಪತ್ರೆಗೆ ಭೇಟಿ ನೀಡಿ, ಕೆಲ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಮುಂಬರುವ ದಿನಗಳಲ್ಲಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ, ವುಹಾನ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲರ್ ಸೇರಿದಂತೆ ವುಹಾನ್ನ ಸುತ್ತಮುತ್ತಲಿನ ಪ್ರದೇಶಗಳಿಗೂ ಭೇಟಿ ನೀಡಿ ತನಿಖೆ ನಡೆಸಲಿದ್ದಾರೆ.
ಇಂಟಿಗ್ರೇಟೆಡ್ ಚೈನೀಸ್ ಮತ್ತು ವೆಸ್ಟರ್ನ್ ಮೆಡಿಸಿನ್ನ ಹುಬೈ ಪ್ರಾಂತೀಯ ಆಸ್ಪತ್ರೆಯಲ್ಲಿ 2019ರ ಡಿಸೆಂಬರ್ 27ರಂದು ಡಾ. ಜಾಂಗ್ ಜಿಕ್ಸಿಯನ್ ಎಂಬ ವೈದ್ಯರು ಮೊದಲ ಬಾರಿ ಹೊಸ ಸೋಂಕಿನ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದರು. ಇದೇ ಆಸ್ಪತ್ರೆಗೆ ನಿನ್ನೆ ತಜ್ಞರು ಭೇಟಿ ನೀಡಿದ್ದಾರೆ.