ಜಿನೀವಾ: ಕೋವಿಡ್-19 ನಿಂದ ಹಳಿ ತಪ್ಪಿರುವ ಸರಕು ಪೂರೈಕೆ ಜಾಲವನ್ನು ವ್ಯವಸ್ಥೆಯನ್ನು ಬ್ಲಾಕ್ಚೇನ್ ತಂತ್ರಜ್ಞಾನದ ಮೂಲಕ ಮತ್ತೆ ಮೊದಲಿನ ಸ್ಥಿತಿಗೆ ತರಬಹುದು ಹಾಗೂ ವಿಶ್ವದ ಆರ್ಥಿಕ ವ್ಯವಸ್ಥೆಗೆ ಪುನಶ್ಚೇತನ ನೀಡಬಹುದು ಎಂದು ವಿಶ್ವ ಆರ್ಥಿಕ ಒಕ್ಕೂಟ (World Economic Forum-WEF) ಹೇಳಿದೆ.
ಭವಿಷ್ಯದಲ್ಲಿ ಉದ್ಯಮ ಹಾಗೂ ಇತರ ಸಂಸ್ಥೆಗಳು ಕೊರೊನಾ ವೈರಸ್ ಹೊಡೆತದಿಂದ ಬೇಗ ಚೇತರಿಸಿಕೊಳ್ಳುವಂತಾಗಲು ಸಹಾಯ ಮಾಡುವ ಹಾಗೂ ತಂತ್ರಜ್ಞಾನದ ಅಪಾಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ "ಬ್ಲಾಕ್ಚೇನ್ ನಿಯೋಜನೆ ಟೂಲ್ಕಿಟ್" ಅನ್ನು ಡಬ್ಲ್ಯೂಇಎಫ್ ಈಗಾಗಲೇ ಬಿಡುಗಡೆ ಮಾಡಿದೆ.
ತನ್ನನ್ನು ತಾನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಸಂಸ್ಥೆ ಎಂದು ಹೇಳಿಕೊಂಡಿರುವ ಡಬ್ಲ್ಯೂಇಎಫ್, ಕೊರೊನಾ ವೈರಸ್ನಂಥ ಸಾಂಕ್ರಾಮಿಕ ಮಹಾಮಾರಿಗಳ ಹರಡುವಿಕೆಯಿಂದ ಸರ್ಕಾರ ಹಾಗೂ ವ್ಯಾಪಾರೋದ್ಯಮಗಳ ಮೇಲೆ ದೊಡ್ಡ ಮಟ್ಟದ ವ್ಯತಿರಿಕ್ತ ಪರಿಣಾಮವುಂಟಾಗುತ್ತದೆ ಎಂದು ತಿಳಿಸಿದೆ.
"ಕೋವಿಡ್-19 ಬಿಕ್ಕಟ್ಟಿನಿಂದ ಜಾಗತಿಕ ವ್ಯಾಪಾರ ವ್ಯವಸ್ಥೆಯ ಉಂಟಾಗಿರುವ ಕೆಟ್ಟ ಪರಿಣಾಮವನ್ನು ಕಡಿಮೆ ಮಾಡಬೇಕಾದರೆ ಜಗತ್ತಿನ ಎಲ್ಲ ರಾಷ್ಟ್ರಗಳು ಒಟ್ಟಾಗಿ ಅಂತಾರಾಷ್ಟ್ರೀಯ ಸರಕು ಸಾಗಣೆ ಪೂರೈಕೆ ಜಾಲವನ್ನು ಬಲಗೊಳಿಸಲು ಪ್ರಯತ್ನಿಸಬೇಕಿದೆ." ಎಂದು ಡಬ್ಲ್ಯೂಇಎಫ್ ಹೇಳಿದೆ.
ಪೂರೈಕೆ ಜಾಲದ ಸಮತೋಲನವು ವಿಶ್ವಾಸ ಹಾಗೂ ಪಾರದರ್ಶಕತೆಗಳನ್ನು ಆಧರಿಸಿದೆ. ಇದನ್ನು ಸಾಧಿಸಬೇಕಾದರೆ ಬ್ಲಾಕ್ಚೇನ್ ತಂತ್ರಜ್ಞಾನವನ್ನು ಹೊಣೆಗಾರಿಕೆಯಿಂದ ನಿಯೋಜಿಸಬೇಕಿದೆ ಎಂದು ಅದು ತಿಳಿಸಿದೆ.
ವಿವಿಧ ಉದ್ಯಮಗಳಲ್ಲಿ ಬ್ಲಾಕ್ಚೇನ್ ಅಳವಡಿಕೆ ಕುರಿತಂತೆ ಕಳೆದೊಂದು ವರ್ಷದಿಂದ ಹೊಸ ವಿಧಾನಗಳನ್ನು ಆವಿಷ್ಕರಿಸಲಾಗಿದೆ. ಸರ್ಕಾರ, ಕಂಪನಿಗಳು, ಸ್ಟಾರ್ಟಪ್ಗಳು, ಶೈಕ್ಷಣಿಕ ಸಂಸ್ಥೆಗಳು, ಸಾಗರಿಕ ಸಮಾಜ, ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಪೂರೈಕೆ ಹಾಗೂ ತಂತ್ರಜ್ಞಾನ ಕ್ಷೇತ್ರದ ನಿಪುಣರೊಂದಿಗೆ ಸೇರಿ ಬ್ಲಾಕ್ಚೇನ್ ತಂತ್ರಜ್ಞಾನವನ್ನು ಸುಧಾರಿಸಲಾಗಿದೆ. ಬ್ಲಾಕ್ಚೇನ್ ಅಳವಡಿಸಿಕೊಳ್ಳಲು ಸಾಮರ್ಥ್ಯ ಹೊಂದಿರದ ಚಿಕ್ಕ ಕಂಪನಿಗಳಿಗೂ ಈ ಬ್ಲಾಕ್ಚೇನ್ ಟೂಲ್ಕಿಟ್ ಸಹಾಯ ಮಾಡಲಿದೆ. ಒಟ್ಟಾರೆಯಾಗಿ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕಂಪನಿಗಳಿಗೆ ಸಮಾನ ರೀತಿಯ ಅವಕಾಶಗಳನ್ನು ಈ ಟೂಲ್ಕಿಟ್ ಒದಗಿಸಲಿದೆ ಎಂದು ಡಬ್ಲ್ಯೂಇಎಫ್ ಬ್ಲಾಕ್ಚೇನ್ ಆ್ಯಂಡ್ ಡಿಜಿಟಲ್ ಕರೆನ್ಸಿ ಪ್ರೊಜೆಕ್ಟ್ ಮುಖ್ಯಸ್ಥ ನಾದಿಯಾ ಹೆವೆಟ್ ಹೇಳಿದ್ದಾರೆ.
ತಮ್ಮ ಪೂರೈಕೆ ಜಾಲದ ನಿರ್ವಹಣೆಗಾಗಿ ಬ್ಲಾಕ್ಚೇನ್ ತಂತ್ರಜ್ಞಾನ ಬಳಸಿಕೊಳ್ಳುತ್ತಿರುವ ಅಬುಧಾಬಿ ಡಿಜಿಟಲ್ ಅಥಾರಿಟಿ, ಹಿಟಾಚಿ, ಸೌದಿ ಅರಾಮ್ಕೊ ಸೇರಿದಂತೆ ಇನ್ನೂ ಹಲವಾರು ಸಣ್ಣ ಹಾಗೂ ಅತಿಸೂಕ್ಷ್ಮ, ಮಧ್ಯಮ ವಲಯದ ಉದ್ಯಮಗಳೊಂದಿಗೆ ಟೂಲ್ಕಿಟ್ ಪ್ರಯೋಗ ಮಾಡಲಾಗಿದೆ.