ಕೀವ್ (ಉಕ್ರೇನ್): ಕೆಲವೇ ದಿನಗಳಲ್ಲಿ ಉಕ್ರೇನ್ ಮಣಿಸಿ ಬಿಡಬಹುದು ಎಂಬ ಆಲೋಚನೆಯೊಂದಿಗೆ ರಷ್ಯಾಧ್ಯಕ್ಷ ಪುಟಿನ್ ಆರಂಭಿಸಿದ ಈ ಭೀಕರ ಯುದ್ಧ ಮುಂದುವರಿದಿದ್ದು, ಸಾವು ನೋವು ಹೆಚ್ಚುತ್ತಿದೆ. ಯುದ್ಧ ಕಠೋರ ರೂಪ ಪಡೆದುಕೊಂಡಿದ್ದು, ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಹೆಚ್ಚಿನ ಕಡೆಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೇ ಮಿಲಿಟರಿ ಕಾರ್ಯಾಚರಣೆಯನ್ನು ಚುರುಕುಗೊಳಿಸುವುದಾಗಿ, ಉಕ್ರೇನ್ನನ್ನು ನಾಶ ಮಾಡುವುದಾಗಿ ಪುಟಿನ್ ಪ್ರತಿಜ್ಞೆ ಮಾಡಿದ್ದಾರೆ.
ಉಕ್ರೇನಿಯನ್ ನಗರಗಳು ಮತ್ತು ನಾಗರಿಕರ ಮೇಲೆ ರಷ್ಯಾ ಪಡೆಗಳು ತಮ್ಮ ದಾಳಿಯನ್ನು ತೀವ್ರಗೊಳಿಸಿದೆ. ಪುಟಿನ್ 'ರಷ್ಯಾ-ವಿರೋಧಿ' ಅನ್ನು ನಾಶಮಾಡಲು ಪ್ರತಿಜ್ಞೆ ಮಾಡಿದ್ದಾರೆ. ಅವರ ವಿಶೇಷ ಮಿಲಿಟರಿ ಕಾರ್ಯಾಚರಣೆ ಯೋಜನೆಯ ಪ್ರಕಾರವೇ ನಡೆಯುತ್ತಿದೆ ಎಂದು ಪುಟಿನ್ ದೂರದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಉಕ್ರೇನಿಯನ್ನರು ಮತ್ತು ರಷ್ಯನ್ನರು ಒಂದೇ(ಸಮಾನ) ಆಗಿದ್ದರು. ಆದ್ರೆ ಉಕ್ರೇನಿಯನ್ನರನ್ನು ಬ್ರೈನ್ ವಾಶ್ ಮಾಡಲಾಗಿದೆ ಎಂದು ಆರೋಪಿಸಿದರು.
ಭೀಕರ ದಾಳಿಯಲ್ಲಿ ನಿಷೇಧಿಸಲ್ಪಟ್ಟ ಶಸ್ತ್ರಗಳನ್ನು ರಷ್ಯಾ ಬಳಸುತ್ತಿರಬಹುದು ಎಂಬ ಗುಮಾನಿಗಳು ಹರಡುತ್ತಿವೆ. ಈಗಾಗಲೇ ಹೆಚ್ಚಿನ ಪ್ರದೇಶಗಳಲ್ಲಿ ಸಾರಿಗೆ ಸೌಲಭ್ಯಗಳು, ಆಸ್ಪತ್ರೆಗಳು, ಶಿಶು ವಿಹಾರ, ವಸತಿ ಕಟ್ಟಡಗಳು, ವಿಶ್ವವಿದ್ಯಾಲಯ, ಜನವಸತಿ ಕಟ್ಟಡಗಳು, ಬಹುಮಹಡಿ ಕಟ್ಟಡಗಳು, ಸಾರ್ವಜನಿಕ ಸೌಲಭ್ಯಗಳು ಸಂಪೂರ್ಣವಾಗಿ ನೆಲಸಮವಾಗಿವೆ.
ಕಳೆದ ರಾತ್ರಿ ಮಾರಿಯುಪೋಲ್‌ನ ದಕ್ಷಿಣ ಬಂದರನ್ನು ರಷ್ಯಾ ಪಡೆಗಳು ಆಕ್ರಮಿಸಿವೆ. ವಿದ್ಯುತ್ ಮತ್ತು ನೀರಿನ ವ್ಯವಸ್ಥೆ ಕಡಿತಗೊಂಡಿದೆ. ಬಂದರಿನ ಮೇಲಿನ ದಾಳಿಯನ್ನು ಖಂಡಿಸಿ, ದಾಳಿಯ ಬಗ್ಗೆ ಉಕ್ರೇನಿಯನ್ ಮಿಲಿಟರಿ ಎಚ್ಚರಿಸಿದೆ.
ಕ್ರಿಮೆಯಾ ಪ್ರದೇಶ ಮತ್ತು ಗಡಿಯ ನಡುವೆ ಭೂಸೇತುವೆಯನ್ನು ರಚಿಸಲು ರಷ್ಯಾ ಪಡೆಗಳು ಯತ್ನಿಸಿದ್ದು, ಗುರುವಾರದಂದು ಖೆರ್ಸನ್ ನಗರವನ್ನು ವಶಕ್ಕೆ ಪಡೆದುಕೊಂಡಿವೆ.
ಇನ್ನೂ ಮಾರಿಯುಪೋಲ್‌ನ ಮೇಲೆ ನಿನ್ನೆ ರಾತ್ರಿಯಿಡೀ ದಾಳಿ ನಡೆಸಿದ್ದು, ವಿದ್ಯುತ್ ಮತ್ತು ನೀರಿನ ವ್ಯವಸ್ಥೆಯನ್ನು ಕಡಿತಗೊಳಿಸಲಾಗಿದೆ. ಒಡೆಸಾ ಬಂದರು ರಷ್ಯಾ ಪಡೆಗಳ ಮುಂದಿನ ಟಾರ್ಗೆಟ್ ಆಗಬಹುದು ಎಂಬ ಭೀತಿ ಶುರುವಾಗಿದೆ.
ಇನ್ನೂ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಜೊತೆ ಮಾತನಾಡಿದರೆ ಮಾತ್ರ ಈ ಯುದ್ಧ ನಿಲ್ಲುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಭಿಪ್ರಾಯಪಟ್ಟಿದ್ದು, ನನ್ನೊಂದಿಗೆ ನೇರವಾಗಿ ಮಾತುಕತೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ: 'ನನ್ನೊಂದಿಗೆ ನೇರವಾಗಿ ಮಾತುಕತೆ ನಡೆಸಿ' ರಷ್ಯಾ ಅಧ್ಯಕ್ಷರಿಗೆ ಸವಾಲು ಹಾಕಿದ ವೊಲೊಡಿಮಿರ್
ಒಟ್ಟಾರೆ ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಮುಂದುವರಿದಿದ್ದು, ಪ್ರತ್ಯಕ್ಷ್ಯ ಮತ್ತು ಪರೋಕ್ಷವಾಗಿ ಆಕ್ರೋಶಗಳು ವ್ಯಕ್ತವಾಗುತ್ತಿವೆ.