ಅಬುಧಾಬಿ: ಅಫ್ಘಾನಿಸ್ತಾನವನ್ನು ಪೂರ್ತಿಯಾಗಿ ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಸ್ಥಳಾಂತರಿಸಲ್ಪಟ್ಟ 5,000 ಆಫ್ಘನ್ ಪ್ರಜೆಗಳಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಾತ್ಕಾಲಿಕವಾಗಿ ಆಶ್ರಯ ನೀಡಲಿದೆ ಎಂದು ಯುಎಇ ವಿದೇಶಾಂಗ ವ್ಯವಹಾರ ಮತ್ತು ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯ ತಿಳಿಸಿದೆ.
ಅಮೆರಿಕದ ಕೋರಿಕೆಯ ಮೇರೆಗೆ ಆಫ್ಘನ್ ನಿರಾಶ್ರಿತರಿಗೆ ತಾತ್ಕಾಲಿಕವಾಗಿ ಆಶ್ರಯ ನೀಡಲು ನಾವು ಒಪ್ಪಿಕೊಂಡಿದ್ದೇವೆ. ಯುಎಸ್ ವಿಮಾನಗಳಲ್ಲಿ ಇವರೆಲ್ಲಾ ಇಲ್ಲಿಗೆ ಬರಲಿದ್ದಾರೆ. ಇಲ್ಲಿ ಒಂದಿಷ್ಟು ಕಾಲ ತಂಗಿ, ಬಳಿಕ ಇವರು ಇತರ ರಾಷ್ಟ್ರಗಳಿಗೆ ಆಶ್ರಯಕ್ಕಾಗಿ ಪ್ರಯಾಣ ಬೆಳೆಸಲಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ: ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿರುವ ತಾಲಿಬಾನ್.. ಹಜಾರ ಪ್ರಾಂತ್ಯದ 9 ಜನರ ಹತ್ಯೆ
ಒಂದು ವಾರ ಆಕ್ರಮಣ ನಡೆಸಿದ್ದ ತಾಲಿಬಾನ್, ಆಗಸ್ಟ್ 15 ರಂದು ರಾಜಧಾನಿ ಕಾಬೂಲ್ ವಶಪಡಿಸಿಕೊಳ್ಳುವ ಮೂಲಕ ಇಡೀ ಅಫ್ಘಾನಿಸ್ತಾನವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಇದು ಯುಎಸ್ ಬೆಂಬಲಿತ ಆಫ್ಘನ್ ಸರ್ಕಾರದ ಪತನಕ್ಕೆ ಕಾರಣವಾಯಿತು.
ಈ ಬಿಕ್ಕಟ್ಟಿನಿಂದ ದಿಕ್ಕು ತೋಚದಂತಾದ ಜನರು ತಾಲಿಬಾನ್ ಉಗ್ರರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಫ್ಘಾನಿಸ್ತಾನದಿಂದ ಪಲಾಯನ ಮಾಡುತ್ತಿದ್ದಾರೆ. ಕೆಲವರ ಪ್ರಯತ್ನ ವಿಫಲವಾಗಿ ಅಲ್ಲಿಯೇ ಉಳಿದಿದ್ದಾರೆ. ಆಫ್ಘನ್ನಲ್ಲಿದ್ದ ಭಾರತೀಯರನ್ನು ದೇಶಕ್ಕೆ ಮರಳಿ ಕರೆತರಲಾಗಿದೆ.