ಮನಿಲಾ: ಫಿಲಿಪೈನ್ಸ್ನಲ್ಲಿ ಅಪ್ಪಳಿಸಿದ ಭೀಕರ ವಾಮ್ಕೊ ಚಂಡಮಾರುತಕ್ಕೆ ಸಾವನ್ನಪ್ಪಿದವರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ ಎಂದು ಫಿಲಿಪೈನ್ ರಾಷ್ಟ್ರೀಯ ಪೊಲೀಸ್ (ಪಿಎನ್ಪಿ) ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಮಾರುತದಿಂದ ಉಂಟಾದ ಪ್ರವಾಹ ಮತ್ತು ಭೂ ಕುಸಿತದಲ್ಲಿ 22 ಜನರು ಕಾಣೆಯಾಗಿದ್ದಾರೆ. ವಾಮ್ಕೊ ಚಂಡಮಾರುತ ಮುಖ್ಯ ದ್ವೀಪ ಲುಝೋನ್ ಮೂಲಕ ಹಾದುಹೋಯಿತು. ನಾಪತ್ತೆಯಾದವರ ಶೋಧ ಕಾರ್ಯ ಮುಂದುವರೆದಿದೆ. ಮೃತಪಟ್ಟವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಇದೆ ಎನ್ನಲಾಗುತ್ತಿದೆ.
ಉತ್ತರ ಫಿಲಿಪೈನ್ಸ್ನ ಕಾಗಾಯನ್ ಮತ್ತು ಇಸಾಬೆಲಾ ಪ್ರಾಂತ್ಯಗಳಲ್ಲಿ ಸಂತ್ರಸ್ತರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಈ ಎರಡು ಪ್ರಾಂತ್ಯಗಳಲ್ಲಿ ಮನೆಗಳ ಮೇಲ್ಛಾಾವಣಿ ಕೆಳಗೆ ಸಿಲುಕಿರುವ ನಿವಾಸಿಗರನ್ನು ಹೊರ ತೆಗೆಯಲಾಗುತ್ತಿದೆ ಎಂದು ಪಿಎನ್ಪಿ ತಿಳಿಸಿದೆ.
ಫಿಲಿಪೈನ್ ಕೋಸ್ಟ್ ಗಾರ್ಡ್ ದೃಶ್ಯಾವಳಿಗಳು ಕಂದು ಬಣ್ಣದ ಪ್ರವಾಹದ ನೀರಿನಲ್ಲಿ ಮುಳುಗಿರುವ ಪ್ರಾಂತ್ಯಗಳ ದೊಡ್ಡ ಭಾಗವನ್ನು ತೋರಿಸಿವೆ. ಇದು ಮ್ಯಾಗಟ್ ಅಣೆಕಟ್ಟಿನಿಂದ ಹೊರಬಂದ ನೀರಾಗಿದೆ.
ಕಾಗಾಯನ್ ಗವರ್ನರ್ ಮ್ಯಾನುಯೆಲ್ ಮಾಂಬಾ ರೆಡಿಯೋ ಡಿಜೆಡ್ಬಿಬಿಗೆ ಸಂದರ್ಶನ ನೀಡಿದ್ದು, ಕಳೆದ ರಾತ್ರಿ ಓರ್ವನನ್ನು ರಕ್ಷಣೆ ಮಾಡಲಾಗಿದೆ. ನನಗೆ ನೆನಪಿರುವಂತೆ ಈ ಪ್ರವಾಹ ಅತ್ಯಂತ ಕೆಟ್ಟದಾಗಿದೆ. ಚಂಡಮಾರುತ ಪ್ರೇರಿತ ಪ್ರವಾಹ ಸಂತ್ರಸ್ತರ ರಕ್ಷಣಗೆ ಹೆಲಿಕಾಪ್ಟರ್ಗಳಿಗೆ ಮನವಿ ಮಾಡಲಾಗಿದೆ. ಪ್ರವಾಹಕ್ಕೆ ಸಿಲುಕಿದ ಕೆಲವು ಪ್ರದೇಶಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ನಿರಾಶ್ರಿತರ ಪರಿಹಾರ ಕೇಂದ್ರಗಳು ಭರ್ತಿಯಾಗಿವೆ. ಕೆಲವು ಸಂತ್ರಸ್ತರು ಕೋವಿಡ್-19 ಭೀತಿ ಮಧ್ಯೆ ನೆರೆಹೊರೆಯವರೊಂದಿಗೆ ಹೊಂದಿಕೊಂಡು ಹೋಗುತ್ತಿದ್ದಾರೆ ಎಂದರು.