ಕಾಬೂಲ್: ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲ್ನ ಶಿಕ್ಷಣ ಕೇಂದ್ರವೊಂದರ ಬಳಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 30 ಜನರು ಬಲಿಯಾಗಿದ್ದು, 70 ಮಂದಿ ಗಾಯಗೊಂಡಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ನಿನ್ನೆ ದಾಳಿ ನಡೆದ ವೇಳೆ 18 ಮಂದಿ ಸಾವನ್ನಪ್ಪಿ, 50 ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಆರೋಗ್ಯ ಇಲಾಖೆ ಸ್ಪುಟ್ನಿಕ್ ಮಾಹಿತಿ ನೀಡಿತ್ತು. ತೀವ್ರವಾಗಿ ಗಾಯಗೊಂಡಿದ್ದ 37 ಜನರನ್ನು ಕಾಬೂಲ್ನ ಜಿನ್ಹಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ಪಶ್ಚಿಮ ಕಾಬೂಲ್ನ ಡ್ಯಾಶ್-ಎ-ಬಾರ್ಚಿಯಾ ಶಿಯಾ ಶಿಕ್ಷಣ ಕೇಂದ್ರದ ಹೊರಗಡೆ ಆತ್ಮಾಹುತಿ ಬಾಂಬ್ ದಾಳಿ ನಡೆದಿತ್ತು. ದಾಳಿಕೋರನೊಬ್ಬ ಶಿಕ್ಷಣ ಕೇಂದ್ರ ಒಳಗೆ ಪ್ರವೇಶಿಸಲು ಯತ್ನಿಸಿದ ವೇಳೆ ಭದ್ರತಾ ಸಿಬ್ಬಂದಿ ಆತನನ್ನು ತಡೆದಾಗ ಈ ಸ್ಫೋಟ ಸಂಭವಿಸಿತ್ತು.
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದ್ದು, ತಾಲಿಬಾನ್ ಈ ದಾಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.