ಹೈದರಾಬಾದ್ : ಗಂಡ ಹೆಂಡತಿ ಇಬ್ಬರೇ ಇರುವ ಸಣ್ಣ ಕುಟುಂಬದಲ್ಲೂ ಚಿಕ್ಕ ಚಿಕ್ಕ ವಿಚಾರಕ್ಕೆ ಗಲಾಟೆ, ಕೋಪ, ಜಗಳ ಮಾಡಿಕೊಳ್ಳುವುದನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಮಹಾ ಪುರುಷ ಬರೋಬ್ಬರಿ 8 ಮಂದಿ ಪತ್ನಿಯರನ್ನು ಹೊಂದಿದ್ದು, ಎಂಟೂ ಪತ್ನಿಯರೊಂದಿಗೆ ಒಂದೇ ಮನೆಯಲ್ಲಿ ಅನ್ಯೋನ್ಯವಾಗಿದ್ದಾನೆ. ಯಾವುದೇ ರೀತಿಯ ಗಲಾಟೆ, ಜಗಳ ಇಲ್ಲದೆ ಈತ ತನ್ನ ಪತ್ನಿಯರೊಂದಿಗೆ ಸುಖ-ಸಂಸಾರ ಮಾಡುತ್ತಿದ್ದಾನೆ. ಆದರೆ,ಈತ ಇರೋದು ಭಾರತದಲ್ಲಿ ಅಲ್ಲ..ಬದಲಿಗೆ ಥಾಯ್ಲೆಂಡ್‌ನಲ್ಲಿ.
ಯಂತ್ರದ ಮೂಲಕ ಸಾಂಪ್ರದಾಯಿಕ ಹಚ್ಚೆ ಹಾಕುವ ಕೆಲಸ ಮಾಡುತ್ತಿರುವ ಟ್ಯಾಟೂ ಆರ್ಟಿಸ್ಟ್ ಒಂಗ್ ಸೊರೊಟ್ ಇದೇ ವಿಚಾರಕ್ಕೆ ಇದೀಗ ಥಾಯ್ಲೆಂಡ್‌ನಲ್ಲಿ ಭಾರಿ ಸುದ್ದಿಯಲ್ಲಿದ್ದಾನೆ. ಇದನ್ನು ಗಮನಿಸಿದ ಅಲ್ಲಿನ ಕೆಲವರು ಒಂಗ್ ಅವರ ಸಂದರ್ಶನ ನಡೆಸಿದ್ದಾರೆ. ಇದರಲ್ಲಿ ಒಂಗ್ ತನ್ನ ಪ್ರೇಮ ಪುರಾಣ ಹಾಗೂ ಮದುವೆಯ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾನೆ.
ಒಂದೇ ನೋಟದಲ್ಲಿ ಪ್ರೇಮಾಂಕುರ!
ನನ್ನ ಎಂಟೂ ಪತ್ನಿಯರೊಂದಿಗೆ ತುಂಬಾ ಆತ್ಮೀಯನಾಗಿದ್ದೇನೆ. ಜಗಳ ಎಂಬುದು ದೂರದ ಮಾತು. ಹೆಂಡ್ತಿಯರು ನನಗೆ ತುಂಬಾ ಪ್ರೀತಿ ತೋರಿಸುತ್ತಾರೆ ಎಂದು ಕೈಹಿಡಿದವರ ಬಗ್ಗೆ ಒಂಗ್ ಸೊರೊಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಂಟೂ ಪತ್ನಿಯರೊಂದಿಗೆ ನನಗೆ ಮೊದಲ ನೋಟದಲ್ಲೇ ಪ್ರೇಮಾಂಕುರವಾಗಿ ಮದುವೆಯಾಗಿತ್ತು ಎಂದಿದ್ದಾನೆ.
ಈತನಿಗೆ ಮದುವೆ ಆಗಿದೆ ಅಂತಾ ತಿಳಿದಿದ್ದರೂ ಉಳಿದ 7 ಮಂದಿ ಸೊರೊಟ್‌ನನ್ನು ಮದುವೆಯಾಗಲು ಒಪ್ಪಿರುವುದು ವಿಚಿತ್ರವೇ ಸರಿ.
ಒಂಗ್ ತನ್ನ ಮೊದಲ ಹೆಂಡತಿ ನಾಂಗ್ ಸ್ಪ್ರೈಟ್ ಅನ್ನು ಸ್ನೇಹಿತನ ಮದುವೆಯಲ್ಲಿ ನೋಡಿದ್ದನಂತೆ. ತಕ್ಷಣ ಅವಳ ಪ್ರೀತಿಯಲ್ಲಿ ಬಿದ್ದಿದ್ದಾನೆ. ತಡಮಾಡದೆ ತನ್ನ ಪ್ರೇಮ ವಿಷಯ ತಿಳಿಸಿ ಮದುವೆಯಾಗಿದ್ದಾನೆ. ಎರಡನೇ ಹೆಂಡತಿ ನಾಂಗ್ ನಾನ್ ಅವರನ್ನು ಮಾರುಕಟ್ಟೆಯಲ್ಲಿ ನೋಡಿ ಇಷ್ಟಪಟ್ಟನಂತೆ.
ಮೂರನೇ ಪತ್ನಿಯನ್ನು ಆಸ್ಪತ್ರೆಯಲ್ಲಿ, ನಾಲ್ಕನೇ, ಐದನೇ ಮತ್ತು ಆರನೇ ಪತ್ನಿಯರನ್ನು ಇನ್‌ಸ್ಟಾ, ಫೇಸ್‌ಬುಕ್ ಹಾಗೂ ಟಿಕ್‌ಟಾಕ್‌ನಲ್ಲಿ ನೋಡಿ ಪ್ರೀತಿಸಿ ನಂತರ ಮದುವೆಯಾಗಿದ್ದಾನೆ. ಈತ ತನ್ನ ತಾಯಿಯೊಂದಿಗೆ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಏಳನೇ ಹೆಂಡತಿ ನಂಗ್ ಫಿಲ್ಮ್‌ರನ್ನು ನೋಡಿ ಪ್ರೀತಿಸಿ ಮದುವೆಯಾಗಿದ್ದಾನೆ.
ಒಂದು ದಿನ ನಾಲ್ವರು ಪತ್ನಿಯರೊಂದಿಗೆ ಟ್ರಿಪ್ ಹೋಗಿದ್ದಾಗ 8ನೇ ಹೆಂಡತಿಯನ್ನು ನೋಡಿ ಅಲ್ಲಿಯೇ ಮದುವೆಯಾಗಿದ್ದಾನೆ. ಬಳಿಕ ಆಕೆಯನ್ನು ಮನೆಗೆ ಕರೆತಂದಿದ್ದಾನೆ. ಆದರೆ, ಈಗ ಎಂಟು ಪತ್ನಿಯರಲ್ಲಿ ಇಬ್ಬರು ಗರ್ಭಿಣಿಯಾಗಿದ್ದಾರೆ. ಮೊದಲ ಪತ್ನಿಗೆ ಒಬ್ಬ ಮಗನಿದ್ದಾನೆ.
ಅಷ್ಟ ಪತ್ನಿಯರಿಗೆ ನಾಲ್ಕೇ ಬೆಡ್ರೂಮ್!
ವಿವಾಹವಾಗಿದ್ದ ಈತನನ್ನೇ ಯಾಕೆ ಮದುವೆಯಾಗಿದ್ದೀರಿ ಎಂದು ಒಂಕ್ ಪತ್ನಿಯೊಬ್ಬರನ್ನು ಕೇಳಿದಾಗ ಅವರು ವಿಚಿತ್ರವಾದ ಉತ್ತರವನ್ನು ನೀಡಿದ್ದಾರೆ. ಆತ ತುಂಬಾ ಆಕರ್ಷಕವಾಗಿದ್ದಾನೆ. ನಮ್ಮ ಬಗ್ಗೆ ಕಾಳಜಿ ವಹಿಸುತ್ತಾನೆ. ಹೀಗಾಗಿ ಸಿಕ್ಕಾಪಟ್ಟೆ ಇಷ್ಟವಾಗಿದ್ದಾನೆ. ಅದಕ್ಕಾಗಿಯೇ ಮದುವೆಯಾದೆ ಎಂದು ಹೇಳಿದ್ದಾರೆ.ಒಂಗ್ ಅವರ ಮನೆಯಲ್ಲಿ ಕೇವಲ ನಾಲ್ಕು ಮಲಗುವ ಕೋಣೆಗಳಿವೆ ಅಷ್ಟೇ. ಒಂದು ಕೊಠಡಿಗೆ ಇಬ್ಬರು ಪತ್ನಿಯರಂತೆ ಒಟ್ಟು 4 ಕೊಠಡಿಗಳಲ್ಲಿ ಎಂಟು ಪತ್ನಿಯರು ವಾಸಿಸುತ್ತಿರುವುದು ಗಮನಾರ್ಹ. ಒಂದೇ ಕೋಣೆಯಲ್ಲಿ ಇಬ್ಬರು ಪತ್ನಿಯರು ಇರುತ್ತಾರೆ. ಮೊದಲ ಪತ್ನಿಯ ಗ್ರೀನ್ ಸಿಗ್ನಲ್ ನಂತರವೇ ಈತ 7 ಮಂದಿಯನ್ನು ವರಿಸಿದ್ದು, ಎಲ್ಲರನ್ನೂ ಸಮಾನವಾಗಿ ಕಾಣುವುದರಿಂದ ಯಾವುದೇ ಗದ್ದಲ, ಗಲಾಟೆಗಳು ಇಲ್ಲದೆ ಸಂಸಾರವನ್ನು ನೆಮ್ಮದಿಯಾಗಿ ನಡೆಸುತ್ತಿದ್ದಾನಂತೆ.
ಎಲ್ಲಾ ಪತ್ನಿಯರಿಂದಲೂ ದುಡಿಮೆ..
ಶ್ರೀಮಂತನಾಗಿರುವುದರಿಂದ ನಾನು 8 ಪತ್ನಿಯರನ್ನು ಮದುವೆಯಾಗಿದ್ದೇನೆ ಎಂದು ಹಲವರು ಭಾವಿಸಿದ್ದಾರೆ. ಆದರೆ, ಇದು ನಿಜವಲ್ಲ. ಟ್ಯಾಟೂ ಹಾಕುವುದಲ್ಲದೆ, ಸಾಮಾಜಿಕ ಜಾಲತಾಣವೊಂದನ್ನು ನಡೆಸುತ್ತಿರುವುದಾಗಿ ಆತ ಬಹಿರಂಗಪಡಿಸಿದ್ದಾನೆ.
ಪತ್ನಿಯರೂ ಕೆಲಸ ಮಾಡುತ್ತಿದ್ದಾರೆ. ಆ ಆದಾಯದಿಂದ ಕುಟುಂಬವನ್ನು ಪೋಷಿಸುತ್ತಿದ್ದೇನೆ ಎಂದು ಒಂಗ್ ಹೇಳಿದ್ದಾನೆ. ಯಾರಾದರೂ ನಿಮ್ಮಿಂದ ದೂರವಿರಲು ಬಯಸಿದರೆ ಏನು ಮಾಡುತ್ತೀರಾ ಎಂಬ ಪ್ರಶ್ನೆಗೆ ಹಾಗೆ ಅಂದುಕೊಂಡವರನ್ನು ವಿರೋಧಿಸುವುದಿಲ್ಲ. ಅವರ ನಿರ್ಧಾರವನ್ನು ಗೌರವಿಸುವುದಾಗಿ ಹೇಳಿದ್ದಾನೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ