ಲಾಹೋರ್(ಪಾಕಿಸ್ತಾನ): ಇತ್ತೀಚೆಗೆ ಸ್ಥಳೀಯರಿಂದ ದಾಳಿಗೊಳಗಾಗಿ ಧ್ವಂಸವಾಗಿದ್ದ ಹಿಂದೂ ದೇವಾಲಯದ ಪುನರ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎಂದು ಪಾಕಿಸ್ತಾನ ಸರ್ಕಾರ ಮಾಹಿತಿ ನೀಡಿದೆ.
ಹಿಂದಿನ ವಾರ ಪಂಜಾಬ್ ಪ್ರಾಂತ್ಯದಲ್ಲಿರುವ ರಹೀಮ್ಯಾರ್ ಖಾನ್ ಜಿಲ್ಲೆಯ ಭೋಂಗ್ ನಗರದಲ್ಲಿರುವ ದೇವಾಲಯದ ಮೇಲೆ ನೂರಾರು ಮಂದಿ ದಾಳಿ ನಡೆಸಿದ್ದರು. ಎಂಟು ವರ್ಷದ ಹಿಂದೂ ಬಾಲಕ ಮುಸ್ಲಿಂ ಸೆಮಿನರಿಯನ್ನು ಅಪವಿತ್ರಗೊಳಿಸಿದ್ದಾನೆ ಎಂದು ಆರೋಪಿಸಿ ಈ ಘಟನೆ ನಡೆಸಲಾಗಿತ್ತು.
ದೇವಾಲಯಕ್ಕೆ ನುಗ್ಗಿದವರು ಶಸ್ತ್ರಸ್ತ್ರಗಳು, ಮರದ ಬಡಿಗೆಗಳಿಂದ ಅಲ್ಲಿದ್ದ ವಸ್ತುಗಳನ್ನು ಒಡೆದುಹಾಕಿದ್ದರು. ಕೆಲವು ಭಾಗವನ್ನು ಸುಟ್ಟುಹಾಕಿದ್ದರು. ಇದಾದ ನಂತರ ಪೊಲೀಸರು ದೇಗುಲಕ್ಕೆ ಭದ್ರತೆ ನೀಡಿದ್ದರು. ಈಗಾಗಲೇ ಅಲ್ಲಿನ ಪೊಲೀಸರು 90ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಈಗ ಪಾಕ್ ಸರ್ಕಾರವು ದೇವಾಲಯದ ಪುನರ್ನಿಮಾಣ ಮಾಡಿದ್ದು, ಸ್ಥಳೀಯ ಹಿಂದೂ ಸಮುದಾಯಕ್ಕೆ ಹಸ್ತಾಂತರಿಸಿದೆ ಎಂದು ರಹೀಮ್ಯಾರ್ ಖಾನ್ ಜಿಲ್ಲಾ ಪೊಲೀಸ್ ಅಧಿಕಾರಿ ಅಸದ್ ಸರ್ಫ್ರಾಜ್ ಸೋಮವಾರ ಪಿಟಿಐಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಪಾಕ್‌ನಲ್ಲಿ ಮತ್ತೆ ಹಿಂದೂ ದೇಗುಲದ ಮೇಲೆ ದಾಳಿ: ಘಟನೆ ಖಂಡಿಸಿದ ಕೇಂದ್ರ ಸಚಿವ ಶೇಖಾವತ್
ಈ ಪ್ರಕರಣದಲ್ಲಿ ಎಷ್ಟು ಆರೋಪಿಗಳನ್ನು ಬಂಧಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸರ್ಫ್ರಾಜ್, ವಿಡಿಯೋ ಫೂಟೇಜ್ ಆಧರಿಸಿ ಇಲ್ಲಿಯವರೆಗೆ ಒಟ್ಟು 90 ಶಂಕಿತರನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಾಂಗ್ಲಾದಲ್ಲೂ ಇಂಥದ್ದೇ ಕೃತ್ಯ..
ಇತ್ತೀಚೆಗಷ್ಟೇ ಅಂದರೆ ಶನಿವಾರ ಬಾಂಗ್ಲಾದೇಶದ ಖುಲ್ನಾ ಜಿಲ್ಲೆಯಲ್ಲೂ ಇಂಥದ್ದೇ ಘಟನೆ ನಡೆದಿದೆ. ದುಷ್ಕರ್ಮಿಗಳು ಇಲ್ಲಿನ ಶಿಯಾಲಿ ಗ್ರಾಮದಲ್ಲಿ ಕನಿಷ್ಠ ನಾಲ್ಕು ಹಿಂದೂ ದೇವಾಲಯಗಳು, ಹಿಂದೂ ಸಮುದಾಯಕ್ಕೆ ಸೇರಿದ ಕೆಲವು ಅಂಗಡಿಗಳು ಮತ್ತು ಮನೆಗಳನ್ನು ಹಾನಿಗೊಳಿಸಿದ್ದರು.
ಹಿಂದೂ ಸಮುದಾಯದೊಂದಿಗೆ ವಾಗ್ವಾದದ ಕಾರಣ, ದೇವಾಲಯಕ್ಕೆ ನುಗ್ಗಿದ್ದ ದುಷ್ಕರ್ಮಿಗಳು, ದೇವತೆಗಳ ವಿಗ್ರಹಗಳನ್ನು ಭಗ್ನಗೊಳಿಸಿದ್ದಾರೆ. ನಂತರ ಹಿಂದೂ ಮುಖಂಡರ ಮನೆಗಳನ್ನೂ ಧ್ವಂಸಗೊಳಿಸಿದ್ದರು. ಈ ಸಂಬಂಧ 10 ಮಂದಿಯನ್ನು ಬಂಧಿಸಿ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪಾಕ್ ಹಿಂದೂ ದೇಗುಲದ ಮೇಲೆ ದಾಳಿ ಪ್ರಕರಣ: 20 ಜನರ ಬಂಧನ, 150 ಮಂದಿ ವಿರುದ್ಧ ಕೇಸ್