ಕಾಬೂಲ್(ಅಫ್ಘಾನಿಸ್ತಾನ) : ಅಫ್ಘನಿಸ್ತಾನವನ್ನ ವಶಪಡಿಸಿಕೊಂಡ ಒಂದು ವಾರದ ಬಳಿಕ ಶೀಘ್ರದಲ್ಲೇ ತಾಲಿಬಾನ್ ಹೊಸ ಸರ್ಕಾರ ರಚಿಸುವುದಾಗಿ ಘೋಷಿಸಿದೆ. ದೇಶ ತೊರೆಯುತ್ತಿರುವ ಜನರನ್ನು ಉಳಿಸಿಕೊಳ್ಳುವ ಭಾಗವಾಗಿ ಉಗ್ರಪಡೆ ಈ ನಿರ್ಧಾರ ಕೈಗೊಂಡಿದೆ.
ತಾಲಿಬಾನ್ ವಕ್ತಾರ ಜಬಿಉಲ್ಲಾ ಮುಜಾಹಿದ್, ಅಫ್ಘನ್ ರಾಜಕೀಯ ನಾಯಕರೊಂದಿಗೆ ಹೊಸ ಸರ್ಕಾರ ರಚನೆ ಕುರಿತು ಮಾತುಕತೆ ನಡೆಸುತ್ತಿದ್ದು, ಸದ್ಯದಲ್ಲಿಯೇ ಹೊಸ ಸರ್ಕಾರ ಘೋಷಿಸಲಾಗುವುದು ಎಂದು ಅಲ್ಲಿನ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ನಮ್ಮ ರಾಜಕೀಯ ಅಧಿಕಾರಿಗಳು, ಕಾಬೂಲ್ನ ರಾಜಕೀಯ ನಾಯಕರನ್ನು ಭೇಟಿಯಾಗಿದ್ದಾರೆ. ನಮಗೆ ಸರ್ಕಾರ ರಚಿಸಲು ಅವರ ಅಭಿಪ್ರಾಯಗಳು ಮುಖ್ಯ. ಶೀಘ್ರದಲ್ಲೇ ಸರ್ಕಾರ ರಚನೆ ಕುರಿತು ಘೋಷಿಸುತ್ತೇವೆ ಎಂದು ತಾಲಿಬಾನ್ ವಕ್ತಾರ ಜಬಿಉಲ್ಲಾ ಮುಜಾಹಿದ್ ಹೇಳಿದ್ದಾರೆ.
ಇದನ್ನೂ ಓದಿ: ಕಾಬೂಲ್ ಏರ್ಪೋರ್ಟ್ಗೆ ತೆರಳುತ್ತಿದ್ದ ಅಮೆರಿಕ ಪ್ರಜೆಗಳನ್ನು ಥಳಿಸಿದ ತಾಲಿಬಾನ್..
ಶನಿವಾರ, ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಕಾಬೂಲ್ಗೆ ಆಗಮಿಸಿ, ಅಫ್ಘನ್ ರಾಜಕೀಯ ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯ್ ಮತ್ತು ರಾಷ್ಟ್ರೀಯ ಸಮನ್ವಯದ ಉನ್ನತ ಮಂಡಳಿ (ಹೆಚ್‌ಸಿಎನ್‌ಆರ್) ಮುಖ್ಯಸ್ಥ ಅಬ್ದುಲ್ಲಾ ಅಬ್ದುಲ್ಲಾ ಜತೆ ತಾಲಿಬಾನ್ ಚರ್ಚೆ ನಡೆಸಿದೆ.
ಈ ಕುರಿತು ಅಬ್ದುಲ್ಲಾ ಅಬ್ದುಲ್ಲಾ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದು, ತಾಲಿಬಾನ್ ನಾಯಕರು ನಮ್ಮನ್ನು ಭೇಟಿಯಾಗಿದ್ದು, ಸರ್ಕಾರ ರಚನೆ ಸಂಬಂಧ ಚರ್ಚಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಅಫ್ಘನ್ ಬಿಕ್ಕಟ್ಟು : ನಾಳೆ ಜಿ-7 ರಾಷ್ಟ್ರಗಳ ತುರ್ತು ಸಭೆ ಕರೆದ ಜಾನ್ಸನ್ ಬೋರಿಸ್
ಆಗಸ್ಟ್ 15ರಂದು ಕಾಬೂಲ್ ಅನ್ನು ತಾಲಿಬಾನ್ ವಶಕ್ಕೆ ಪಡೆದು, ತನ್ನ ಅಧಿಪತ್ಯ ಸ್ಥಾಪಿಸಿದೆ. ತಾಲಿಬಾನ್ಗೆ ಹೆದರಿ ಅಲ್ಲಿನ ಜನರು ದೇಶ ತೊರೆಯುತ್ತಿದ್ದಾರೆ. ಜನತೆ ಸ್ಥಳಾಂತರಗೊಳ್ಳುವುದನ್ನು ತಡೆಯಲು ತಾಲಿಬಾನ್ ಸರ್ಕಾರ ರಚನೆಗೆ ಮುಂದಾಗಿದೆ..