ಕಾಬೂಲ್: ಆಫ್ಘನ್ ರಾಜಕೀಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಮುಂದಿನ ಮೂರು ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಆಡಳಿತಕ್ಕೆ ಬರುತ್ತದೆ ಎಂದು ತಾಲಿಬಾನ್ ಸರ್ವೋಚ್ಚ ನಾಯಕ, ಇಸ್ಲಾಮಿಕ್ ಧರ್ಮಗುರು ಮುಲ್ಲಾ ಹಿಬತುಲ್ಲಾ ಅಖುಂದ್ಜಾದಾ ತಿಳಿಸಿದ್ದಾರೆ. ತಾಲಿಬಾನ್ ವ್ಯವಹಾರದ ಪ್ರಮುಖ ಸ್ಥಳವಾದ ಕಂದಹಾರ್‌ನಿಂದ ಕಾರ್ಯಕಲಾಪಗಳನ್ನು ನಡೆಸಲಿದ್ದಾರೆ. ಹೊಸ ಸರ್ಕಾರವು ಇರಾನಿನ ನಾಯಕತ್ವ ಹೋಲುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ದೇಶದಲ್ಲಿ ಹೊಸ ಸರ್ಕಾರ ರಚನೆಗೆ ಈಗಾಗಲೇ ಸನ್ನದ್ಧವಾಗಿರುವುದಾಗಿ ತಾಲಿಬಾನ್‌ನ ಹಿರಿಯ ನಾಯಕ ಮುಫ್ತಿ ಇನಾಮುಲ್ಲಾ ಸಮಂಗನಿ ನಿನ್ನೆಯಷ್ಟೇ ತಿಳಿಸಿದ್ದರು. ಎಲ್ಲಾ ಸಮಾಲೋಚನೆಗಳನ್ನು ನಡೆಸಲಾಗಿದೆ. ಕ್ಯಾಬಿನೆಟ್ ರಚನೆ ಕುರಿತು ಮಾತುಕತೆ ಮುಗಿದಿದೆ ಎಂದು ಇನಾಮುಲ್ಲಾ ಹೇಳಿದರು. ಹೊಸ ಸರ್ಕಾರದ ನೀತಿ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ವಿವರಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿರುವ ರಾಜ್ಯಗಳು (ಪ್ರಾಂತ್ಯಗಳು) ರಾಜ್ಯಪಾಲರ ನಿಯಂತ್ರಣದಲ್ಲಿವೆ. ಜಿಲ್ಲೆಗಳನ್ನು ಜಿಲ್ಲಾ ಗವರ್ನರ್‌ಗಳು ಪ್ರತಿನಿಧಿಸುತ್ತಾರೆ. ತಾಲಿಬಾನ್ ಈಗಾಗಲೇ ರಾಜ್ಯಪಾಲರು ಮತ್ತು ಪೊಲೀಸ್ ಮುಖ್ಯಸ್ಥರನ್ನು ಹಾಗೂ ಪ್ರಾಂತೀಯ ಮತ್ತು ಜಿಲ್ಲಾ ಕಮಾಂಡರ್‌ಗಳನ್ನು ನೇಮಿಸಿದೆ. ಹೊಸ ಸರ್ಕಾರದಲ್ಲಿ ಎಲ್ಲ ವರ್ಗದ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗುವುದು ಎಂದು ದೋಹಾದಲ್ಲಿರುವ ತಾಲಿಬಾನ್ ರಾಜಕೀಯ ಕಚೇರಿಯ ಉಪ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಗುರುವಾರ ಹೇಳಿದ್ದಾರೆ.
ಭಾರತದೊಂದಿಗೆ ಸ್ನೇಹ
ತಾಲಿಬಾನ್ ಭಾರತ, ಅಮೆರಿಕ ಮತ್ತು ಐರೋಪ್ಯ ಒಕ್ಕೂಟದೊಂದಿಗೆ ಸ್ನೇಹ ಸಂಬಂಧವನ್ನು ಬಯಸುತ್ತದೆ ಎಂದು ಅಬ್ಬಾಸ್ ಹೇಳಿದ್ದಾರೆ. ಕಾಬೂಲ್‌ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗಳು ಇನ್ನೊಂದು 48 ಗಂಟೆಗಳಲ್ಲಿ ಪುನಾರಂಭಗೊಳ್ಳಲಿದ್ದು, ಸೂಕ್ತ ದಾಖಲೆಗಳು ಹೊಂದಿರುವವರು ದೇಶ ತೊರೆಯಲು ಅನುವು ಮಾಡಿಕೊಡುತ್ತವೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ತಾಲಿಬಾನ್‌ಗೆ ಭಾರತದ ಜೊತೆ ವ್ಯಾಪಾರ ಸಂಬಂಧ ಮುಂದುವರಿಸುವ ಬಯಕೆ