ಕಾಬೂಲ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ಎರಡನೇ ಅತಿದೊಡ್ಡ ನಗರ ಕಂದಹಾರ್ ಹಾಗೂ ಲಷ್ಕರ್ ಗಹ್ವನ್ನು ವಶಪಡಿಸಿಕೊಂಡಿರುವುದಾಗಿ ತಾಲಿಬಾನ್ ಉಗ್ರರು ಹೇಳಿಕೊಂಡಿದ್ದಾರೆ.
ತಾಲಿಬಾನ್ ಉಗ್ರರು ಶುಕ್ರವಾರ ಅಫ್ಘಾನಿಸ್ತಾನದ ಮೇಲೆ ತಮ್ಮ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿದರು. ರಾಜಧಾನಿ ಕಾಬೂಲ್‌ನಿಂದ ಸಿಬ್ಬಂದಿಯನ್ನು ಸ್ಥಳಾಂತರಿಸಲು ಪಾಶ್ಚಿಮಾತ್ಯ ರಾಯಭಾರ ಕಚೇರಿಗಳು ಸೈನ್ಯವನ್ನು ಕಳುಹಿಸಲು ಸಿದ್ಧತೆ ನಡೆಸಿದಾಗ ಅದರ ಎರಡನೇ ಮತ್ತು ಮೂರನೇ ದೊಡ್ಡ ನಗರಗಳ ಮೇಲೆ ಹಿಡಿತ ಸಾಧಿಸಿದ್ದಾರೆ. ಸದ್ಯ ರಾಜಧಾನಿ ಮತ್ತು ಇತರ ಕೆಲವೇ ಭೂ-ಭಾಗಗಳು ಸರ್ಕಾರದ ನಿಯಂತ್ರಣದಲ್ಲಿವೆ. ಉಳಿದಂತೆ ಹೆಚ್ಚಿನ ಭೂಭಾಗ ತಾಲಿಬಾನ್ ಉಗ್ರರ ವಶವಾಗಿವೆ.
ದಕ್ಷಿಣದ ಎರಡನೇ ದೊಡ್ಡ ನಗರವಾದ ಕಂದಹಾರ್ ಮತ್ತು ಪಶ್ಚಿಮದಲ್ಲಿ ಹೆರಾತ್ ಅನ್ನು ಉಗ್ರರು ವಶಪಡಿಸಿಕೊಂಡಿದ್ದಾರೆ. ಇದು ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಅಫ್ಘಾನಿಸ್ತಾನದ ಪ್ರಮುಖ ನಗರಗಳಲ್ಲಿ, ಸರ್ಕಾರವು ಉತ್ತರದಲ್ಲಿ ಮಜರ್ - ಇ - ಷರೀಫ್ ಮತ್ತು ಪೂರ್ವದಲ್ಲಿ ಪಾಕಿಸ್ತಾನದ ಗಡಿಯ ಸಮೀಪದಲ್ಲಿರುವ ಜಲಾಲಾಬಾದ್ ಅನ್ನು ಕಾಬುಲ್ ಜೊತೆಗೆ ನಿಯಂತ್ರಣದಲ್ಲಿಟ್ಟುಕೊಂಡಿದೆ.
ಅಫ್ಘಾನಿಸ್ತಾನದ 34 ಪ್ರಾಂತೀಯ ರಾಜಧಾನಿಗಳಲ್ಲಿ ಕಂದಹಾರ್ 12ನೇ ಪ್ರಾಂತೀಯ ರಾಜಧಾನಿಯಾಗಿದೆ. ಕಂದಹಾರ್ ಅನ್ನೂ ತಾಲಿಬಾನ್ ವಶಕ್ಕೆ ಪಡೆದುಕೊಂಡಿದ್ದು, ಈ ಮೂಲಕ ತಾಲಿಬಾನಿಗಳು ಅಫ್ಘಾನಿಸ್ತಾನದ ಬಹುಭಾಗವನ್ನು ಈಗಾಗಲೇ ಆವರಿಸಿದ್ದಾರೆಂದು ಹೇಳಲಾಗುತ್ತಿದೆ.
"ಕಂದಹಾರ್ ಅನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡಿದ್ದೇವೆ. ಮುಜಾಹಿದ್ದೀನ್, ನಗರದ ಹುತಾತ್ಮರ ಚೌಕ ತಲುಪಿದೆ" ಎಂದು ತಾಲಿಬಾನ್ ವಕ್ತಾರರು ಘೋಷಿಸಿದ್ದಾರೆ. ದಕ್ಷಿಣದಲ್ಲಿ ಲಷ್ಕರ್ ಗಹ್ ಮತ್ತು ವಾಯುವ್ಯದಲ್ಲಿ ಕಾಲಾ - ಇ- ನಾವ್ ಪಟ್ಟಣಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯ ಘೋರ್ ಪ್ರಾಂತ್ಯದ ರಾಜಧಾನಿಯಾದ ಫಿರುಜ್ ಕೊಹ್ ಅನ್ನು ಹೋರಾಟವಿಲ್ಲದೆ ಹಸ್ತಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರವನ್ನು ಸೋಲಿಸಲು ಮತ್ತು ಇಸ್ಲಾಮಿಕ್ ಆಡಳಿತದ ತಮ್ಮ ಕಟ್ಟುನಿಟ್ಟಿನ ಆವೃತ್ತಿಯನ್ನು ಹೇರಲು, ಆಗಸ್ಟ್ 6 ರಿಂದ ಅಫ್ಘಾನಿಸ್ತಾನದ 34 ಪ್ರಾಂತೀಯ ರಾಜಧಾನಿಗಳಲ್ಲಿ 14 ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಈಗ ದೇಶದ ಮೂರನೇ ಎರಡರಷ್ಟು ಭಾಗವನ್ನು ತಾಲಿಬಾನಿಗಳು ವಶಕ್ಕೆ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದ್ದು, ಹಲವಾರು ಪ್ರಾಂತ್ಯಗಳಲ್ಲಿ ಸರ್ಕಾರಿ ಪಡೆಗಳ ಮೇಲೆ ಒತ್ತಡ ಹೇರಲಾಗುತ್ತಿದೆಯಂತೆ. ಈ ಬೆಳವಣಿಗೆ ಅಲ್ಲಿನ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಓದಿ: ಅಫ್ಘಾನಿಸ್ತಾನದ ಮೂರನೇ ಒಂದು ಭಾಗವೀಗ ತಾಲಿಬಾನ್ ವಶ: ಯುದ್ಧಪೀಡಿತ ದೇಶದ ಸಂಪೂರ್ಣ ಚಿತ್ರಣ ಇಲ್ಲಿದೆ..