ಕಾಬೂಲ್(ಅಫ್ಘಾನಿಸ್ತಾನ): ಅಮೆರಿಕದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಅಫ್ಘಾನಿಸ್ತಾನದಲ್ಲಿ ಏಳು ದಿನಗಳಿಂದ ನಡೆಯುತ್ತಿದ್ದ ಹಿಂಸಾಚಾರವನ್ನು ಕಡಿಮೆ ಮಾಡಲು ತಾಲಿಬಾನ್ ನಾಯಕ ಮುಲ್ಲಾ ಹಿಬತುಲ್ಲಾ ಅಖುಂಡ್ಜಾಡಾ ಒಪ್ಪಿಕೊಂಡಿದ್ದಾನೆ ಎಂದು ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ.
ಶಾಂತಿ ಒಪ್ಪಂದಕ್ಕೆ ಅಮೆರಿಕ ಸಹಿ ಹಾಕಿದ ನಂತರ ಅಫ್ಘಾನಿಸ್ತಾನದ ಪ್ರಮುಖ ನಗರಗಳಲ್ಲಿ ಹಿಂಸಾಚಾರವನ್ನು ಕಡಿಮೆ ಮಾಡಲಾಗುವುದು ಎಂದು ತಾಲಿಬಾನ್ ನಾಯಕ ಹೇಳಿದ್ದಾನೆ. ಈ ಒಪ್ಪಂದದಲ್ಲಿ ವಿದೇಶಿ ಪಡೆಗಳನ್ನು ಹಿಂತೆಗೆದುಕೊಳ್ಳುವ ಷರತ್ತು ಒಳಗೊಂಡಿರಬೇಕು ಎಂಬ ವಿಚಾರವನ್ನು ಉಲ್ಲೇಖಿಸಿ ಟೋಲೋ ನ್ಯೂಸ್ ಬುಧವಾರ ವರದಿ ಮಾಡಿದೆ. ಶಾಂತಿ ಮಾತುಕತೆ ಕುರಿತು ಹಿರಿಯ ಸಮನ್ವಯ ಸಮಿತಿಯನ್ನು ರಚಿಸಿದೆ ಎಂದು ಅಫ್ಘಾನಿಸ್ತಾನ್ ಸರ್ಕಾರ ತಿಳಿಸಿದೆ.
ಶಾಂತಿ ಕುರಿತ ಎಲ್ಲಾ ಕ್ರಮಗಳು ಮತ್ತು ನಿಲುವುಗಳನ್ನು ರಾಜ್ಯ ಸಚಿವಾಲಯದ ಸಮನ್ವಯದೊಂದಿಗೆ ಕೈಗೊಳ್ಳಬೇಕು ಎಂದು ಅಧ್ಯಕ್ಷ ಅಶ್ರಫ್ ಘನಿ ಸುಗ್ರಿವಾಜ್ಞೆಯಲ್ಲಿ ಹೇಳಿದ್ದಾರೆ. ಶಾಂತಿ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ 14 ಸರ್ಕಾರಿ ಸಂಸ್ಥೆಗಳ ನಡುವಿನ ಪ್ರಯತ್ನಗಳನ್ನು ಸಚಿವಾಲಯದ ನೇತೃತ್ವದ ಸಮಿತಿ ಸಮನ್ವಯಗೊಳಿಸಲಿದೆ ಎಂದು ಶಾಂತಿ- ಸಮನ್ವಯ ವಕ್ತಾರ ನಜಿಯಾ ಅನ್ವಾರಿ ಹೇಳಿದರು.
ಅಫ್ಘಾನಿಸ್ತಾನದ ದೀರ್ಘಕಾಲದ ಬಿಕ್ಕಟ್ಟಿಗೆ ಮಾತುಕತೆಯ ಮೂಲಕ ರಾಜಿ ಸೂತ್ರವನ್ನು ಕಂಡುಕೊಳ್ಳಲು 2018 ರ ಅಕ್ಟೋಬರ್‌ನಲ್ಲಿ ದೋಹಾದಲ್ಲಿ ಯುಎಸ್ ಮತ್ತು ತಾಲಿಬಾನ್ ನಡುವೆ ಮ್ಯಾರಥಾನ್ ಮಾತುಕತೆ ಪ್ರಾರಂಭವಾಯಿತು. ಕಾಬೂಲ್‌ನಲ್ಲಿ ಅಮೆರಿಕದ ಸೈನಿಕರು ಸೇರಿದಂತೆ 10 ಜನರನ್ನು ಕೊಂದ ತಾಲಿಬಾನ್ ನೀತಿಯಿಂದ ಸಂಬಂಧ ಮುರಿದುಹೋಗಿತ್ತು.