ವಾಷಿಂಗ್ಟನ್: ಯುದ್ಧಪೀಡಿತ ಅಫ್ಫಾನಿಸ್ತಾನದಲ್ಲಿ ಈಗಾಗಲೇ ನೀಡಿದ್ದ ಆಗಸ್ಟ್ 31ರ ಡೆಡ್‌ಲೈನ್ ಬಳಿಕವೂ ಅಮೆರಿಕದವರನ್ನು ಸ್ಥಳಾಂತರಿಸಲು ತಾಲಿಬಾನ್ ಒಪ್ಪಿಕೊಂಡಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಈಗಾಗಲೇ 4,500 ರಿಂದ 6,000 ಮಂದಿಯನ್ನು ಏರ್‌ಲಿಫ್ಟ್ ಮಾಡಲಾಗಿದೆ. ಇನ್ನೂ 1,500 ಮಂದಿ ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದಾರೆ ಎಂದಿದ್ದಾರೆ.
ಅಮೆರಿಕನ್ನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ತಾಲಿಬಾನ್ ಅನುಮತಿ ನೀಡಿದೆ. ಅಲ್ಲದೆ ಅಮೆರಿಕ ನಮ್ಮ ಮೈತ್ರಿ ಹಾಗೂ ಪಾಲುದಾರ ರಾಷ್ಟ್ರವಾಗಿದೆ ಎಂದು ಹೇಳಿತ್ತು. ಸುಮಾರು 114 ರಾಷ್ಟ್ರಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಅಫ್ಘಾನ್‌ನಿಂದ ಯಾರೇ ಹೊರ ಹೋದರೂ ಅವರ ಸುರಕ್ಷತಾ ಪ್ರಯಾಣದ ಜವಾಬ್ದಾರಿ ತಾಲಿಬಾನ್‌ಗಳದ್ದೇ ಆಗಿರುತ್ತದೆ. ಇದಕ್ಕೆ ನಿಗದಿತ ಸಮಯವೂ ಅಗತ್ಯವೂ ಇಲ್ಲ ಎಂದು ಬ್ಲಿಂಕೆನ್ ಹೇಳಿದ್ದಾರೆ.
ಇದನ್ನೂ ಓದಿ: ಜಗತ್ತಿನ ಅತಿದೊಡ್ಡ ಏರ್‌ಲಿಫ್ಟ್: ಇಲ್ಲಿಯವರೆಗೆ ಅಫ್ಘಾನಿಸ್ತಾನದಿಂದ 82 ಸಾವಿರ ಜನರ ಸ್ಥಳಾಂತರ
ಅಫ್ಘಾನಿಸ್ತಾನ ಈಗ ತಾಲಿಬಾನ್ ನಿಯಂತ್ರಣದಲ್ಲಿ ಇರುವುದರಿಂದ ಐಸಿಸ್ ದಾಳಿಯ ಸಾಧ್ಯತೆಗಳಿವೆ. ಹೀಗಾಗಿ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಅಪಾಯದ ಸ್ಥಳಗಳಲ್ಲಿದ್ದ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಮ್ಮ ಕೆಲಸಕ್ಕೆ ಯಾವುದೇ ಗಡುವು ಇಲ್ಲ, ಹಲವು ವರ್ಷಗಳಿಂದ ನಮ್ಮೊಂದಿಗೆ ಕೈಜೋಡಿಸಿದ್ದ ಅನೇಕ ಅಫ್ಘಾನ್ ಜನರು ಅಲ್ಲಿಂದ ಬೇರೆ ಕಡೆ ಬರಲು ಬಯಸುತ್ತಾರೆ ಇವರನ್ನು ಸದ್ಯಕ್ಕೆ ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ.
ಆಗಸ್ಟ್ 31ರ ನಂತರವೂ ಏರ್‌ಲಿಫ್ಟ್ ಕಾರ್ಯಾಚರಣೆ ಮುಂದುವರಿಯುತ್ತದೆ. ಸುಮಾರು 90 ಯುಎಸ್ ಸೇನಾ ವಿಮಾನಗಳು ಹಾಗೂ ಇತರೆ ಆಪ್ತ ರಾಷ್ಟ್ರಗಳ ವಿಮಾನಗಳ ಮೂಲಕ ಈಗಾಗಲೇ 19,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಬ್ಲಿಂಕೆನ್ ವಿವರಿಸಿದ್ದಾರೆ.