ಕಾಬೂಲ್: ಯುಎನ್ ನಿರಾಶ್ರಿತರ ಏಜೆನ್ಸಿಯೊಂದಿಗೆ ಕೆಲಸ ಮಾಡುತ್ತಿದ್ದ ಇಬ್ಬರು ವಿದೇಶಿ ಪತ್ರಕರ್ತರು ಮತ್ತು ನೆರವು ಸಂಸ್ಥೆಯ ಅಫ್ಘಾನ್ ಸಿಬ್ಬಂದಿಯನ್ನು ತಾಲಿಬಾನ್ ಶುಕ್ರವಾರ ಬಿಡುಗಡೆ ಮಾಡಿದೆ ಎಂದು ಯುಎನ್‌ಹೆಚ್‌ಸಿಆರ್ ಹೇಳಿದೆ.
ಗುರುತಿನ ದಾಖಲೆಗಳನ್ನು ಹೊಂದಿಲ್ಲದ ಕಾರಣ ಅವರನ್ನು ಬಂಧಿಸಲಾಗಿದೆ ಎಂದು ತಾಲಿಬಾನ್ - ನೇಮಿತ ಸಂಸ್ಕೃತಿ ಮತ್ತು ಮಾಹಿತಿಯ ಉಪಮಂತ್ರಿ ಜಬಿಹುಲ್ಲಾ ಮುಜಾಹಿದ್ ಅವರು ಟ್ವೀಟ್ ಮಾಡಿದ ನಂತರ ಈ ಪ್ರಕಟಣೆ ಹೊರಡಿಸಲಾಗಿದೆ. ಅವರ ಗುರುತು ದೃಢಪಟ್ಟ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಮುಜಾಹಿದ್ ಹೇಳಿದ್ದಾರೆ.
ಯುಎನ್‌ಹೆಚ್‌ಸಿಆರ್‌ನೊಂದಿಗೆ ನಿಯೋಜನೆಗೊಂಡಿರುವ ಇಬ್ಬರು ಪತ್ರಕರ್ತರು ಮತ್ತು ಅವರೊಂದಿಗೆ ಕೆಲಸ ಮಾಡುತ್ತಿರುವ ಆಫ್ಘನ್ ಪ್ರಜೆಗಳ ಬಿಡುಗಡೆ ನಮಗೆ ಸಮಾಧಾನವಾಗಿದೆ ಎಂದು ಜಿನೀವಾ ಮೂಲದ ಸಂಸ್ಥೆ ಹೇಳಿದೆ.
ಬಂಧಿತ ವಿದೇಶಿ ಪತ್ರಕರ್ತರಲ್ಲಿ ಒಬ್ಬರು ಆಂಡ್ರ್ಯೂ ನಾರ್ತ್. ಇವರು ಮಾಜಿ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ಪತ್ರಕರ್ತರಾಗಿದ್ದು, ಅಫ್ಘಾನಿಸ್ತಾನದಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ. ಅವರ ಪತ್ನಿ ನಟಾಲಿಯಾ ಆಂಟೆಲವಾ ಅವರನ್ನು ಬಿಡುಗಡೆ ಮಾಡುವಂತೆ ಈ ಹಿಂದೆ ಟ್ವಿಟರ್‌ನಲ್ಲಿ ಮನವಿ ಮಾಡಿದ್ದರು.
ಪತ್ರಕರ್ತರ ಸಂರಕ್ಷಣಾ ಸಮಿತಿ ಕೂಡ ಇಬರ ಬಂಧನವನ್ನು ಖಂಡಿಸಿ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿತ್ತು. ತಾಲಿಬಾನ್ ಆಂಡ್ರ್ಯೂ ನಾರ್ತ್ ಸೇರಿದಂತೆ ಬಂಧಿಸಿರುವ ಎಲ್ಲ ಪತ್ರಕರ್ತರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಪತ್ರಿಕಾ ಸದಸ್ಯರನ್ನು ಕಿರುಕುಳ ಮತ್ತು ಬಂಧನದಲ್ಲಿಡುವುದನ್ನು ನಿಲ್ಲಿಸಬೇಕು ಎಂದು ಸಿಪಿಜೆ ಹೇಳಿಕೆ ತಿಳಿಸಿದೆ.
ಅಫ್ಘಾನಿಸ್ತಾನದ ಮೇಲೆ 20 ವರ್ಷಗಳ ಮಧ್ಯಸ್ಥಿಕೆಯ ನಂತರ ಯುಎಸ್ ಮತ್ತು ನ್ಯಾಟೋ ಪಡೆಗಳು ತಮ್ಮ ಸೈನ್ಯವನ್ನು ಹಿಂತೆಗೆದುಕೊಂಡಿವೆ. ಹೀಗಾಗಿ ಆಗಸ್ಟ್ ಮಧ್ಯದಲ್ಲಿ ತಾಲಿಬಾನ್ ಕಾಬೂಲ್ ಮತ್ತು ದೇಶದ ಬಹುಭಾಗ ವಶಪಡಿಸಿಕೊಂಡಿತು. ತನ್ನ ನಿಯಂತ್ರಣವನ್ನು ತೆಗೆದುಕೊಂಡಾಗಿನಿಂದ, ತಾಲಿಬಾನ್ ವ್ಯಾಪಕವಾದ ನಿರ್ಬಂಧಗಳನ್ನು ವಿಧಿಸಿದೆ. ಅವುಗಳಲ್ಲಿ ಹೆಚ್ಚಿನವು ಮಹಿಳೆಯರ ಮೇಲೆ ನಿರ್ದೇಶಿಸಲ್ಪಟ್ಟಿವೆ.
ಇದನ್ನೂ ಓದಿ: 4ನೇ ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಜೈಶಂಕರ್ ಭಾಗಿ: ಇಲ್ಲಿದೆ ಹೈಲೈಟ್ಸ್..