ಕಾಬೂಲ್ (ಅಫ್ಘಾನಿಸ್ತಾನ): ತಾಲಿಬಾನ್ ಉಗ್ರರಿಗೆ ಅಶ್ರಫ್ ಘನಿ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರ ಕೊನೆಗೂ ಮಂಡಿಯೂರಿದೆ. ದೇಶದ ಮುಂದಿನ ಅಧ್ಯಕ್ಷನನ್ನಾಗಿ ಮುಲ್ಲಾ ಅಬ್ದುಲ್ ಫನಿ ಬರದಾರ್ ಎಂಬಾತನನ್ನು ತಾಲಿಬಾನ್ ಆಯ್ಕೆ ಮಾಡಿದೆ ಎಂದು ತಿಳಿದುಬಂದಿದೆ. ಇನ್ನು, ಉಗ್ರರು ರಾಜಧಾನಿ ಕಾಬೂಲ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಬಗ್ಗೆ ಇತ್ತೀಚೆಗಿನ ವರದಿಗಳು ಹೇಳುತ್ತಿವೆ.
‘ಎರಡೇ ಗಂಟೆಗಳಲ್ಲಿ ಕಾಬೂಲ್ ನಮ್ಮ ಕೈವಶ’- ತಾಲಿಬಾನ್
ದೇಶದ ಪ್ರಮುಖ ನಗರ ಜಲಾಲಾಬಾದ್ ಅನ್ನು ವಶಪಡಿಸಿಕೊಂಡಿರುವ ರಣೋತ್ಸಾಹದಲ್ಲಿರುವ ತಾಲಿಬಾನ್, ಇದೀಗ ರಾಜಧಾನಿ ಕಾಬೂಲ್ ದ್ವಾರದಲ್ಲಿ ಸಮರ ಸನ್ನದ್ಧತೆಯಿಂದ ನಿಂತಿದೆ. ಯಾರಾದರೂ ಕಾಬೂಲ್ ತೊರೆಯಲು ಇಚ್ಛಿಸಿದರೆ ಅವರನ್ನು ಸುರಕ್ಷಿತ ಮಾರ್ಗದ ಮೂಲಕ ಕಳಿಸಿಕೊಡಿ, ಹಿಂಸಾಚಾರ ಮಾಡಬೇಡಿ ಎಂದು ತಮ್ಮ ಸಂಘಟನೆಯ ಸದಸ್ಯರಿಗೆ ದೋಹಾದಲ್ಲಿರುವ ತಾಲಿಬಾನ್ ನಾಯಕ ಕರೆ ನೀಡಿದ್ದಾನೆ. ಇದೇ ವೇಳೆ, ತಾಲಿಬಾನ್ ಉಗ್ರರು, ಮುಂದಿನ ಎರಡೇ ಗಂಟೆಗಳಲ್ಲಿ ಕಾಬೂಲ್ ಅನ್ನು ವಶಕ್ಕೆ ಪಡೆಯುವುದಾಗಿ ಘೋಷಿಸಿಕೊಂಡಿದ್ದಾರೆ.
ತಾಲಿಬಾನ್ ನಾಯಕರು ಹೇಳಿದ್ದೇನು?
ಅಫ್ಘಾನಿಸ್ತಾನದ ನಾಯಕತ್ವವನ್ನು ನಾವು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ. ಕಾಬೂಲ್‌ನ ಗೇಟ್‌ಗಳನ್ನು ದಾಟದಂತೆ ಮತ್ತು ಬಲವಂತವಾಗಿ ನಗರವನ್ನು ವಶಪಡಿಸಿಕೊಳ್ಳದಂತೆ ತಮ್ಮ ಪಡೆಗಳಿಗೆ ಸೂಚನೆ ನೀಡಿರುವುದಾಗಿ ತಾಲಿಬಾನ್ ಹೇಳಿಕೆ ಬಿಡುಗಡೆ ಮಾಡಿದೆ. ಸರ್ಕಾರಿ ಕಟ್ಟಡಗಳು ಸುರಕ್ಷಿತವಾಗಿದ್ದು, ಯಾರಾದರೂ ನಗರವನ್ನು ತೊರೆಯಲು ಬಯಸಿದರೆ, ಅವರನ್ನು ಸುರಕ್ಷಿತವಾಗಿ ಕಳಿಸಿಕೊಡಬೇಕೆಂದು ನಮ್ಮ ಪಡೆಗಳಿಗೆ ಸೂಚಿಸಿದ್ದೇವೆ ಎಂದು ತಾಲಿಬಾನ್ ವಕ್ತಾರನೊಬ್ಬ ಹೇಳಿದ್ದಾನೆ.
ಅಮೆರಿಕ ರಾಜತಾಂತ್ರಿಕರ ಸ್ಥಳಾಂತರ
ಕಾಬೂಲ್‌ನಲ್ಲಿರುವ ಅಮೆರಿಕ ರಾಜತಾಂತ್ರಿಕ ಅಧಿಕಾರಿಗಳು ಹೆಲಿಕಾಪ್ಟರ್ ಮೂಲಕ ಸ್ಥಳಾಂತರಗೊಳ್ಳುತ್ತಿದ್ದಂತೆ, ತಾಲಿಬಾನ್ ಪಡೆ ಕಾಬೂಲ್ ಪ್ರವೇಶಿಸಿದೆ.