ಕಾಬೂಲ್: ಅಫ್ಘಾನಿಸ್ತಾನದ ಮೂರನೇ ಒಂದು ಭಾಗವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿರುವ ತಾಲಿಬಾನ್ ಉಗ್ರ ಸಂಘಟನೆ ಇದೀಗ ನಂಗರ್‌ಹಾರ್ ಪ್ರಾಂತ್ಯದ ರಾಜಧಾನಿ ಹಾಗೂ ದೇಶದ ದೊಡ್ಡ ನಗರಗಳಲ್ಲಿ ಒಂದಾಗ ಜಲಾಲಾಬಾದ್ ಅನ್ನೂ ಸಹ ತನ್ನ ವಶಕ್ಕೆ ಪಡೆದಿದೆ.
ದೇಶದ 34ರ ಪೈಕಿ 18 ಪ್ರಾಂತೀಯ ರಾಜಧಾನಿಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಅಫ್ಘಾನಿಸ್ತಾನದ ನಾಲ್ಕನೇ ಅತಿದೊಡ್ಡ ನಗರವಾದ ಮಜರ್-ಇ-ಷರೀಫ್ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ ಇದೀಗ ಅಫ್ಘನ್ ಸರ್ಕಾರದ ಅಡಿಯಲ್ಲಿರುವ ಒಂದೇ ಒಂದು ಬಹುದೊಡ್ಡ ನಗರವೆಂದರೆ ರಾಜಧಾನಿ ಕಾಬೂಲ್ ಆಗಿದೆ. ಉಗ್ರರ ಕಣ್ಣು ಈಗ ಕಾಬೂಲ್ ಮೇಲೆ ಇದ್ದು, ಶೀಘ್ರದಲ್ಲೇ ವಶಪಡಿಸಿಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: ಕಾಬೂಲ್ ಹೊಸ್ತಿಲಲ್ಲಿ ತಾಲಿಬಾನ್: ರಾಜೀನಾಮೆಗೆ ಸಿದ್ಧರಾದ್ರಾ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ!?
"ವಿಶ್ವದ ಅತ್ಯುತ್ತಮ ನಗರಗಳಲ್ಲಿ ಒಂದಾದ ನನ್ನ ಜನ್ಮಸ್ಥಳ ಜಲಾಲಾಬಾದ್ ಕೂಡ ತಾಲಿಬಾನರ ಪಾಲಾಗಿದೆ. ಅಲ್ಲಿನ ನಾಗರಿಕರಿಗೆ ಉಗ್ರರು ಯಾವುದೇ ಹಾನಿ ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ದೇವರು ಮತ್ತು ಜಗತ್ತು ಅವರನ್ನು ನೋಡುತ್ತಿದೆ. ತಾವು ಬದಲಾಗಿದ್ದೇವೆ ಎಂಬುದನ್ನು ತಾಲಿಬಾನ್ ಉಗ್ರರು ಸಾಬೀತುಪಡಿಸಬೇಕಿದೆ" ಎಂದು ಅಫ್ಘನ್ ಸರ್ಕಾರದ ಮಾಜಿ ಹಿರಿಯ ಸಲಹೆಗಾರ ಎಂ. ಶಫೀಕ್ ಹಮ್ದಮ್ ಹೇಳಿದ್ದಾರೆ.
ಯುದ್ಧ ಪೀಡಿತ ರಾಷ್ಟ್ರವಾದ ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದಾಗಿನಿಂದ ತಾಲಿಬಾನ್ ತನ್ನ ಆಕ್ರಮಣವನ್ನು ತೀವ್ರಗೊಳಿಸಿದೆ. ಪರಿಣಾಮವಾಗಿ ಸಾವಿರಾರು ನಾಗರಿಕರು, ನೂರಾರು ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಿಂಸೆ ತಾಳಲಾರದೆ ಜನರು ಸ್ಥಳಾಂತರವಾಗುತ್ತಿದ್ದಾರೆ.