ಪೇಶಾವರ್ (ಪಾಕಿಸ್ತಾನ): ಆಫ್ಘನ್ನಲ್ಲಿ ಚುನಾಯಿತ ಸರ್ಕಾರವನ್ನು ಉರುಳಿಸಿ, ಅಧಿಪತ್ಯ ಸಾಧಿಸಿರುವ ತಾಲಿಬಾನ್ ಸರ್ಕಾರ ರಚನೆಗೆ ಹೆಣಗಾಡುತ್ತಿದೆ. ಬಂಡುಕೋರರ ಗುಂಪು ಕಾಬೂಲ್ನಲ್ಲಿ ಹೊಸ ಸರ್ಕಾರ ರಚನೆಯನ್ನು ಶನಿವಾರ ಘೋಷಿಸುವ ನಿರೀಕ್ಷೆಯಿತ್ತು.
ಆದರೆ, ಸರ್ಕಾರ ರಚನೆಯನ್ನು ಮುಂದಿನ ವಾರಕ್ಕೆ ಮುಂದೂಡಿರುವುದಾಗಿ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ. ಹೊಸ ಸರ್ಕಾರ ಮತ್ತು ಕ್ಯಾಬಿನೆಟ್ ಸದಸ್ಯರ ಕುರಿತು ಮುಂದಿನ ವಾರ ಘೋಷಣೆ ಮಾಡಲಾಗುವುದು ಎಂದು ಮುಜಾಹಿದ್ ತಿಳಿಸಿದ್ದಾರೆ.
ಆಗಸ್ಟ್ 15 ರಂದು ಕಾಬೂಲ್ಅನ್ನು ವಶಪಡಿಸಿಕೊಂಡರೂ, ಸರ್ಕಾರ ರಚಿಸುವುದಕ್ಕೆ ಉಗ್ರರು ಹಿಂದೇಟು ಹಾಕುತ್ತಿದ್ದಾರೆ. ಆಗಸ್ಟ್ 15 ರಿಂದ ಈವರೆಗೆ ಸರ್ಕಾರ ರಚಿಸುತ್ತೇವೆಂದು ಘೋಷಿಸಿದ್ದ ತಾಲಿಬಾನ್ ಎರಡು ಬಾರಿ ವಿಳಂಬ ಮಾಡಿದೆ. ಸರ್ಕಾರ ರಚನೆಯ ಉಸ್ತುವಾರಿಯನ್ನು ತಾಲಿಬಾನ್ನ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ನೇತೃತ್ವ ವಹಿಸಿಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: ಪಾಕ್ ಐಎಸ್ಐ ಮುಖ್ಯಸ್ಥ ಅಫ್ಘನ್ಗೆ ಭೇಟಿ : ಅಂತಾರಾಷ್ಟ್ರೀಯ ಸಮುದಾಯದಲ್ಲಿ ಕುತೂಹಲ
ಸರ್ಕಾರ ರಚನೆ ಕುರಿತು ವಿವಿಧ ಗುಂಪುಗಳೊಂದಿಗೆ ಮಾತುಕತೆ ನಡೆಸಲು ತಾಲಿಬಾನ್ ಖಲೀಲ್ ಹಕ್ಕಾನಿ ನೇತೃತ್ವದ ಸಮಿತಿಯೊಂದನ್ನು ರಚಿಸಿತ್ತು. ಕಾಬೂಲ್ನಲ್ಲಿ ಸ್ಥಿರ ಸರ್ಕಾರ ರಚಿಸುವುದಕ್ಕೆ ತಾಲಿಬಾನ್ ಪ್ರಯತ್ನ ನಡೆಸುತ್ತಿದ್ದು, ನಮ್ಮ ಸರ್ಕಾರ ಜಗತ್ತಿಗೆ ಸ್ವೀಕಾರಾರ್ಹವಾಗಿರಲಿದೆ. ಹಾಗಾಗಿ ಸರ್ಕಾರ ರಚನೆ ವಿಳಂಬವಾಗಲಿದೆ ಎಂದು ಹಕ್ಕಾನಿ ಸಮಜಾಯಿಷಿ ನೀಡಿದ್ದಾರೆ.
ಇದನ್ನೂ ಓದಿ: ಅಫ್ಘನ್ನಲ್ಲಿ ಮಹಿಳೆಯರಿಂದ ಹಕ್ಕುಗಳಿಗಾಗಿ ಪ್ರತಿಭಟನೆ : ತಾಲಿಬಾನಿಗಳಿಂದ ಅಶ್ರುವಾಯು ಪ್ರಯೋಗ
ಆಫ್ಘನ್ನ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಸಹೋದರ ತಾಲಿಬಾನ್ಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. ತಾಲಿಬಾನ್ ಸರ್ಕಾರದಲ್ಲಿ ಉನ್ನತ ಸ್ಥಾನ ಸಿಗುವ ನಿರೀಕ್ಷೆಯಲ್ಲಿ ಅವರಿದ್ದಾರೆ.