ತೈಪೆ(ತೈವಾನ್): ಉಕ್ರೇನ್‌ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವಾಗಲೇ ಇತರ ದೇಶಗಳ ಅಂತಾರಾಷ್ಟ್ರೀಯ ಸಂಬಂಧಗಳಲ್ಲೂ ಗಮನಾರ್ಹ ಬದಲಾವಣೆಯಾಗುತ್ತಿದೆ. ಅಮೆರಿಕದ ಮನವಿಯ ಮೇರೆಗೆ ಸಾಕಷ್ಟು ರಾಷ್ಟ್ರಗಳು ರಷ್ಯಾದ ಮೇಲೆ ಹಲವು ರೀತಿಯ ಆರ್ಥಿಕ ನಿರ್ಬಂಧಗಳನ್ನು ಹೇರುತ್ತಿವೆ. ಈ ಬೆನ್ನಲ್ಲೇ ತೈವಾನ್ ಕೂಡಾ 'ನಿರ್ಬಂಧ ಹೇರುವ' ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ಬೆನ್ನಲ್ಲೇ, ಚೀನಾ ಮತ್ತು ತೈವಾನ್ ಸಂಬಂಧಗಳೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೀಡಾಗುತ್ತಿವೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ತೈವಾನ್ ರಷ್ಯಾದ ಮೇಲೆ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಬೆಂಬಲಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ತೈವಾನ್ ವಿದೇಶಾಂಗ ಸಚಿವಾಲಯ, ಶಾಂತಿಯುತ ರಾಜತಾಂತ್ರಿಕ ಮಾತುಕತೆಗಳ ಮೂಲಕ ವಿವಾದಗಳನ್ನು ಪರಿಹರಿಸಿಕೊಳ್ಳಬೇಕಾಗಿತ್ತು. ಇದಕ್ಕೆ ಬದಲಾಗಿ ರಷ್ಯಾ ಬೆದರಿಸಲು ಮುಂದಾಗಿದೆ. ಸರ್ಕಾರ ರಷ್ಯಾದ ನಡೆಗೆ ವಿಷಾದ ವ್ಯಕ್ತಪಡಿಸುತ್ತದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಉಕ್ರೇನ್ ವಿರುದ್ಧದ ತನ್ನ ಮಿಲಿಟರಿ ಆಕ್ರಮಣವನ್ನು ರಷ್ಯಾ ನಿಲ್ಲಿಸಬೇಕು. ಸಾಧ್ಯವಾದಷ್ಟು ಬೇಗ ಉಭಯ ರಾಷ್ಟ್ರಗಳ ನಡುವೆ ಶಾಂತಿಯುತ ಮಾತುಕತೆ ನಡೆಯಬೇಕು. ಶಾಂತಿಯುತವಾಗಿ ಮಾತುಕತೆಗಳು ಆರಂಭವಾಗುವವರೆಗೆ ಅಂತಾರಾಷ್ಟ್ರೀಯ ಆರ್ಥಿಕ ನಿರ್ಬಂಧಗಳನ್ನು ರಷ್ಯಾ ಮೇಲೆ ತೈವಾನ್ ಘೋಷಿಸುತ್ತದೆ ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ: ರಷ್ಯಾ ದಾಳಿಗೆ ನಾಗರಿಕರು, ಸೈನಿಕರು ಸೇರಿ 137 ಮಂದಿ ಸಾವು: ಉಕ್ರೇನ್ ಅಧ್ಯಕ್ಷ
ಇನ್ನು ಚೀನಾ ಮತ್ತು ತೈವಾನ್ ವಿವಾದವು ರಷ್ಯಾ ಮತ್ತು ಉಕ್ರೇನ್ ವಿವಾದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಇದರ ಜೊತೆಗೆ ತೈವಾನ್ ಕೂಡಾ ಚೀನಾ ಆಕ್ರಮಣದ ನೆರಳಿನಲ್ಲೇ ಬದುಕುತ್ತಿದೆ. ಈ ಯೂರೋಪ್ನ ಕೆಲವು ರಾಷ್ಟ್ರಗಳೊಂದಿಗೆ ರಷ್ಯಾದ ವಿರುದ್ಧ ನಿರ್ಬಂಧವನ್ನು ತೈವಾನ್ ಒಪ್ಪಿಕೊಂಡಿರುವುದರಿಂದ, ಮುಂದಿನ ದಿನಗಳಲ್ಲಿ ರಷ್ಯಾ ಸ್ನೇಹಿತ ಚೀನಾ ನಡೆ ಹೇಗಿರಬಹುದೆಂದು ಕಾದು ನೋಡಬೇಕಿದೆ.