ಕೊಲಂಬೊ : ಪ್ರವಾಸಕ್ಕೆಂದು ಶ್ರೀಲಂಕಾಕ್ಕೆ ತೆರಳಿ ಲಾಕ್ಡೌನ್ನಿಂದ ತಮ್ಮ ದೇಶಕ್ಕೆ ವಾಪಸ್ ಆಗದೆ ಅಲ್ಲಿಯೇ ಸಿಲುಕಿರುವ ಅನೇಕ ಪ್ರವಾಸಿಗರಿಗೆ ಸ್ಥಳೀಯ ಕೆಫೆ ಮಾಲೀಕ ಉಚಿತವಾಗಿ ಊಟ ಮತ್ತು ವಸತಿ ವ್ಯವಸ್ಥೆ ಮಾಡಿದ್ದಾರೆ.
ಕೊಲಂಬೊದಿಂದ 120 ಕಿ.ಮೀ ದೂರದಲ್ಲಿರುವ ಎಲಾ ಎಂಬ ಸ್ಥಳದಲ್ಲಿ 11 ದೇಶಗಳ ಸುಮಾರು 40 ಪ್ರವಾಸಿಗರು ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಕೆಫೆ ಮಾಲೀಕ ದರ್ಶನ ರತ್ನಾಯಕೆ ಎಲ್ಲಾ ವಿದೇಶಿಗರ ಹೆಸರು ಪಟ್ಟಿ ಮಾಡಿ ಉಚಿತವಾಗಿ ಊಟೋಪಚಾರ ನೋಡಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಲಾಡ್ಜ್ ಮಾಲೀಕರನ್ನು ಸಂಪರ್ಕಿಸಿ ಹಣ ಪಡೆಯದಂತೆ ತಿಳಿಸಿದ್ದಾರೆ. ನಮ್ಮ ಜೀವನೋಪಾಯ ಪ್ರವಾಸೋದ್ಯಮವನ್ನು ಅವಲಂಬಿಸಿದೆ. ಪ್ರವಾಸಿಗರು ತೊಂದರೆಯಲ್ಲಿದ್ದಾಗ ನಾವು ಅವರಿಗೆ ಸಹಾಯ ಮಾಡಬೇಕು. ಹಣವೇ ಎಲ್ಲವೂ ಅಲ್ಲ, ಈ ರೀತಿಯ ಕಷ್ಟದ ಸಮಯದಲ್ಲಿ ನಾವು ಸಹಾಯ ಮಾಡಬೇಕು ಎಂದು ದರ್ಶನ ರತ್ನಾಯಕೆ ಹೇಳಿದ್ದಾರೆ.
ಪ್ರವಾಸೋದ್ಯಮ ಸ್ಥಗಿತಗೊಂಡಾಗ ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ, ಪ್ರವಾಸ ಮಾರ್ಗದರ್ಶಕರಿಗೆ 27,000 ಡಾಲರ್ ದೇಣಿಗೆ ನೀಡಿದ್ದಾರೆ. ದರ್ಶನ ಅವರ ಸಹಾಯದ ಬಗ್ಗೆ ಮಾತನಾಡಿರುವ ಪ್ರವಾಸಿಗರೊಬ್ಬರು, ಅವರು ನೀಡಿದ ಬಾಕ್ಸ್ನಲ್ಲಿ ನಾವು ಆಹಾರ ಮಾತ್ರವಲ್ಲ ಬದುಕುವ ಭರವಸೆಯನ್ನೂ ಪಡೆದಿದ್ದೇವೆ ಎಂದಿದ್ದಾರೆ.