ಸಿಯೋಲ್: ದಕ್ಷಿಣ ಕೊರಿಯಾದ ಅಧ್ಯಕ್ಷೀಯ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಅಲ್ಲಿನ ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 11 ಗಂಟೆಯವರೆಗೆ ಶೇ.16ರಷ್ಟು ಮತದಾನವಾಗಿದೆ. ದಕ್ಷಿಣ ಕೊರಿಯಾದಾದ್ಯಂತ 44.2 ಮಿಲಿಯನ್ ಅರ್ಹ ಮತದಾರರು ಇದ್ದಾರೆ. ಮತದಾನ ಆರಂಭವಾದ ಐದು ಗಂಟೆಗಳಲ್ಲಿ 14,464 ಮತಗಟ್ಟೆಗಳಲ್ಲಿ ಏಳು ಮಿಲಿಯನ್ ಜನ ತಮ್ಮ ಹಕ್ಕು ಚಲಾಯಿಸಿದರು ಎಂದು ರಾಷ್ಟ್ರೀಯ ಚುನಾವಣಾ ಆಯೋಗ (ಎನ್‌ಇಸಿ) ಹೇಳಿದೆ.
ಕಳೆದ 2017ರಲ್ಲಿ ನಡೆದ ಅಧ್ಯಕೀಯ ಚುನಾವಣೆಯಲ್ಲಿ ಇದೇ ಬೆಳಗ್ಗೆ 11 ಗಂಟೆ ವೇಳೆಗೆ ನಡೆದಿದ್ದ ಮತದಾನ ಪ್ರಮಾಣಕ್ಕಿಂತ ಈ ಬಾರಿ ಶೇ.19.4ರಷ್ಟು ಮತದಾನ ಕಡಿಮೆಯಾಗಿದೆ ಎಂದು ಯೋನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ ವಾರದಲ್ಲಿ ಎರಡು ದಿನಗಳ ಕಾಲ ಮತದಾನ ಸಹ ನಡೆದಿದ್ದು, ಇದನ್ನು ಈಗ ಪರಿಗಣಿಸಿಲ್ಲ. ಮಾ.4 ಮತ್ತು 5ರಂದು ನಡೆದ ಮತದಾನಕ್ಕೆ 16 ಮಿಲಿಯನ್‌ಗಿಂತಲೂ ಹೆಚ್ಚು ಅಂದರೆ ಶೇ.36.9ರಷ್ಟು ಜನ ನೋಂದಾಯಿತ ಮತದಾರರು ಇದ್ದರು. ಆಗಿನ ಮತದಾನದ ಎಣಿಕೆ ಮತ್ತು ಈಗ ನಡೆಯುತ್ತಿರುವ ಮತದಾನದ ಎಣಿಕೆ ಒಟ್ಟಿಗೆ ನಡೆಯಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಅವಿಶ್ವಾಸ ನಿರ್ಣಯಕ್ಕೂ ಮುನ್ನವೇ ಬಿಟ್ಹೋಗಿ: ಪಾಕ್ ಪ್ರಧಾನಿ ರಾಜೀನಾಮೆಗೆ 24 ಗಂಟೆಗಳ ಡೆಡ್ ಲೈನ್