ಕಾಬೂಲ್(ಆಫ್ಘಾನಿಸ್ತಾನ): ಗುರುವಾರ ರಾತ್ರಿ ಪೂರ್ವ ಆಫ್ಘಾನಿಸ್ತಾನ ಪೊಲೀಸರು ವೈಮಾನಿಕ ದಾಳಿ ನಡೆಸಿ 18 ತಾಲಿಬಾನ್ ಉಗ್ರರ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಈ ದಾಳಿಗೆ ತಿರುಗೇಟು ನೀಡಿರುವ ಭಯೋತ್ಪಾದಕರು ಆರು ಪೊಲೀಸ್ ಅಧಿಕಾರಿಗಳನ್ನು ಕೊಂದು ಹಾಕಿದ್ದಾರೆ.
ಪೂರ್ವ ಆಫ್ಘಾನಿಸ್ತಾನದಲ್ಲಿ ಭದ್ರತಾ ಪಡೆಗಳು ನಡೆಸಿದ್ದ ಏರ್ಸ್ಟ್ರೈಕ್ನಲ್ಲಿ 18 ತಾಲಿಬಾನ್ ಭಯೋತ್ಪಾದಕರು ಹತರಾಗಿದ್ದರು. ಆಫ್ಘಾನ್ ಪ್ರಾಂತ್ಯದ ನಂಗರ್ಹಾರ್ನಲ್ಲಿ ಈ ದಾಳಿ ನಡೆಸಲಾಗಿತ್ತು. ಇದೀಗ ಮುಯ್ಯಿ ತೀರಿಸಿಕೊಂಡಿರುವ ಭಯೋತ್ಪಾದಕರು ಸ್ಥಳೀಯ ಪೊಲೀಸ್ ಕಮಾಂಡರ್ ಸೇರಿದಂತೆ ಆರು ಪೊಲೀಸ್ ಅಧಿಕಾರಿಗಳ ಹತ್ಯೆ ಮಾಡಿದ್ದಾರೆ. ಉಳಿದಂತೆ ನಾಲ್ವರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪೊಲೀಸರು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಕಾಳಗ ಮುಂದುವರೆದಿದೆ ಎಂದು ವರದಿಯಾಗಿದೆ.
ಓದಿ: ವೈಮಾನಿಕ ದಾಳಿ: 18 ತಾಲಿಬಾನ್ ಭಯೋತ್ಪಾದಕರು ಹತ
45 ಪ್ರಯಾಣಿಕರಿದ್ದ ಬಸ್ ಕಿಡ್ನಾಪ್:
ಇದರ ಬೆನ್ನಲ್ಲೇ 45 ಪ್ಯಾಸೆಂಜರ್‌ಗಳಿದ್ದ ಬಸ್ ಅನ್ನು ಭಯೋತ್ಪಾದಕರು ಕಿಡ್ನಾಪ್ ಮಾಡಿದ್ದಾರೆ. ಇಂದು ಬೆಳಗ್ಗೆ 7 ಗಂಟೆಗೆ ಈ ಘಟನೆ ನಡೆದಿದೆ. ಹೆರಾತ್ ನಗರ-ತುರ್ಘುಂಡಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬಸ್ ಕಿಡ್ನಾಪ್ ಮಾಡಿ ಅಪರಿಚಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದಾಗಿ ಅಲ್ಲಿನ ಜಿಲ್ಲಾ ಮುಖ್ಯಸ್ಥರು ತಿಳಿಸಿದ್ದಾರೆ.
ಕತಾರ್ ರಾಜಧಾನಿ ದೋಹಾದಲ್ಲಿ ಸರ್ಕಾರ ಮತ್ತು ತಾಲಿಬಾನ್ ನಡುವೆ ಶಾಂತಿ ಮಾತುಕತೆ ನಡೆಯುತ್ತಿದ್ದರೂ ಉಗ್ರರು ಹಿಂಸಾಚಾರದಲ್ಲಿ ನಿರತರಾಗಿದ್ದಾರೆ. ಸೆಪ್ಟೆಂಬರ್ನಿಂದ ಆರಂಭಗೊಂಡಿರುವ ಶಾಂತಿ ಮಾತುಕತೆಯಲ್ಲಿ ಇಲ್ಲಿಯವರೆಗೆ ಯಾವುದೇ ಮಹತ್ವದ ಮುನ್ನಡೆ ದೊರೆತಿಲ್ಲ. ಇದರ ಬೆನ್ನಲೇ ಈ ಹಿಂಸಾಚಾರ ನಡೆದಿದೆ.