ಕಾಬೂಲ್: ಐಎಸ್(ಇಸ್ಲಾಮಿಕ್ ಸ್ಟೇಟ್) ದಾಳಿಯ ಬೆದರಿಕೆ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಿಂದ ಸೇನೆ ಹಾಗೂ ಜನರನ್ನು ಹಿಂತೆಗೆದುಕೊಳ್ಳುವುದನ್ನು ಪೂರ್ಣಗೊಳಿಸಲು ಮತ್ತು ಮಿತ್ರರಾಷ್ಟ್ರಗಳನ್ನು ಸ್ಥಳಾಂತರಿಸಲು ಯುಎಸ್ ಪಡೆಗಳು ಕಾಬೂಲ್ ವಿಮಾನ ನಿಲ್ದಾಣದಲ್ಲಿ ರಾಕೆಟ್‌ಗಳನ್ನು ಹಾರಿಸಿದ್ದಾರೆ.
ಅಧ್ಯಕ್ಷ ಜೋ ಬೈಡನ್ ಅವರು ಅಫ್ಘಾನಿಸ್ತಾನದಿಂದ ಎಲ್ಲಾ ಯುಎಸ್ ಪಡೆಗಳನ್ನು ಹಿಂತೆಗೆದುಕೊಳ್ಳಲು ಮಂಗಳವಾರದ ಗಡುವು ವಿಧಿಸಿದ್ದಾರೆ. ಈ ಮೂಲಕ 20 ವರ್ಷಗಳ ಹಿಂದಿನ ದಾಳಿಗೆ ಪ್ರತೀಕಾರವಾಗಿ ಆರಂಭವಾದ ತನ್ನ ರಾಷ್ಟ್ರದ ಸುದೀರ್ಘ ಮಿಲಿಟರಿ ಸಂಘರ್ಷವನ್ನು ಈ ಮೂಲಕ ಮುಕ್ತಾಯಗೊಳಿಸಿದೆ.
ಕಾಬೂಲ್ ವಿಮಾನ ನಿಲ್ದಾಣದಿಂದ ಈವರೆಗೆ 120,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಕರೆದೊಯ್ಯಲಾಗಿದೆ. ಮಂಗಳವಾರ ಅಧಿಕೃತವಾಗಿ ಸಾವಿರಾರು ಅಮೆರಿಕನ್ ಪಡೆಗಳು ಕೊನೆಯದಾಗಿ ಹೊರಬರಲಿವೆ. ಆದರೆ ಯುಎಸ್ ಪಡೆಗಳು ಈಗ ಮುಖ್ಯವಾಗಿ ತಮ್ಮನ್ನು ಮತ್ತು ಅಮೆರಿಕದ ರಾಜತಾಂತ್ರಿಕರನ್ನು ಸುರಕ್ಷಿತವಾಗಿ ಹೊರಗೆ ತರುವುದರ ಮೇಲೆ ಗಮನ ಕೇಂದ್ರೀಕರಿಸಿವೆ.
ತಾಲಿಬಾನ್‌ನ ಪ್ರತಿಸ್ಪರ್ಧಿಗಳಾದ ಐಎಸ್ ಗುಂಪು ಕಳೆದ ವಾರಾಂತ್ಯದಲ್ಲಿ ವಿಮಾನ ನಿಲ್ದಾಣದ ಪರಿಧಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ ನಂತರ, ಇಲ್ಲಿನ ಜನರು ವಾಪಸ್ ಹೋಗಲು ಅತಿದೊಡ್ಡ ಬೆದರಿಕೆ ನಿರ್ಮಾಣ ಆಗಿತ್ತು. ಅದರಲ್ಲಿ 13 ಯುಎಸ್ ಸೈನಿಕರು ಸೇರಿದಂತೆ 100 ಕ್ಕೂ ಹೆಚ್ಚು ಜನರ ಬಲಿಯಾಗಿದ್ದರು.
ಹೀಗಾಗಿ, ಸಂಭಾವ್ಯ ದಾಳಿ ಬಗ್ಗೆ ಬೈಡನ್ ಎಚ್ಚರಿಸಿದ್ದು, ಉಗ್ರ ಸಂಘಟನೆ ಸಿದ್ಧಪಡಿಸಿದ್ದ ಆತ್ಮಾಹುತಿ ಬಾಂಬ್ ತುಂಬಿದ್ದ ವಾಹನದ ಮೇಲೆ ಕಾಬೂಲ್‌ನಲ್ಲಿ ಭಾನುವಾರ ರಾತ್ರಿ ವಾಯುದಾಳಿ ನಡೆಸಿ ಧ್ವಂಸಗೊಳಿಸಿದೆ. ಇದರ ನಡುವೆಯೂ ಇಂದು ಬೆಳಿಗ್ಗೆ ವಿಮಾನ ನಿಲ್ದಾಣದಲ್ಲಿ ರಾಕೆಟ್‌ಗಳನ್ನು ಹಾರಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ರಾಕೆಟ್ ದಾಳಿ ನಡೆಸಲಾಗಿದೆ ಎಂದು ಶ್ವೇತಭವನ ದೃಢಪಡಿಸಿದೆ. ಆದರೆ ಅಲ್ಲಿನ ಕಾರ್ಯಾಚರಣೆಗಳು "ತಡೆರಹಿತ" ಎಂದು ಹೇಳಲಾಗಿದೆ. ರಾಕೆಟ್ ಹಾರಾಟದಿಂದ ಯಾವುದೇ ಸಾವುನೋವುಗಳು ಅಥವಾ ವಿಮಾನ ನಿಲ್ದಾಣದ ಹಾನಿಯ ವರದಿಗಳಿಲ್ಲದಿದ್ದರೂ, ಈಗಾಗಲೇ ವರ್ಷಗಳ ಯುದ್ಧದಿಂದ ಆಘಾತಕ್ಕೊಳಗಾದ ಸ್ಥಳೀಯರಿಗೆ ಹೆಚ್ಚಿನ ಆತಂಕ ಉಂಟು ಮಾಡಿದೆ.