ಬೀಜಿಂಗ್: 'ಕೊರೊನಾ' ಅನ್ನೋ ವೈರಸ್ ಹುಟ್ಟಿದ ಚೀನಾದಲ್ಲಿ, ವೈರಸ್ ಭಾರಿ ಮಟ್ಟದಲ್ಲಿ ನಿಯಂತ್ರಣಕ್ಕೆ ಬಂದಿತ್ತು. ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಗೆ ಕೊರೊನಾ ಕಬಂಧಬಾಹು ಪಸರಿಸುತ್ತಿದ್ದರೂ, ಚೀನಾದಲ್ಲಿ ಆಶ್ಚರ್ಯಕರ ರೀತಿಯಲ್ಲಿ ವೈರಸ್ ನಿಯಂತ್ರಣವಾಗಿತ್ತು. ಆದ್ರೆ ಈಗ ಇದೆಲ್ಲಾ ಉಲ್ಟಾ ಹೊಡೆದಂತೆ ಕಾಣಿಸುತ್ತಿದೆ. ಇದೇ ಪಾಶ್ಚಿಮಾತ್ಯರ ನಾಡಿನಲ್ಲಿ ಕೊರೊನಾ ವೈರಸ್ ತನ್ನ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದಂತಿದೆ.
ಹೌದು, ಚೀನಾದಲ್ಲಿ ಮೊನ್ನೆ ಮೊನ್ನೆವರೆಗೆ ದಿನದಿಂದ ದಿನಕ್ಕೆ ಕೊರೊನಾ ನಿಯಂತ್ರಣದಲ್ಲೇ ಇತ್ತು. ಹೀಗಾಗಿ ಕೆಲ ದಿನಗಳಲ್ಲಿ ಕೊರೊನಾದ ತವರಾದ ವುಹಾನ್ ನಗರದಲ್ಲಿ ಲಾಕ್ಡೌನ್ ಸಡಿಲಿಸಿ, ಜನಸಂಚಾರಕ್ಕೆ ಅವಕಾಶ ಮಾಡಿಕೊಡಲಾಯ್ತು. ಆ ಹಿಂದೆ, ದೇಶದಲ್ಲಿ ಕೈಗೊಳ್ಳಲಾದ ಲಾಕ್ಡೌನ್ ಪ್ರಭಾವವೋ, ಅಥವಾ ಚಿಕಿತ್ಸೆ ಮಹಿಮೆಯೋ ಏನೋ.. ಒಟ್ಟು ಸೋಂಕಿತರಲ್ಲಿ ಶೇ. 95ರಷ್ಟು ಜನ ಗುಣಮುಖರಾಗಿದ್ದರು. ಅಲ್ಲದೆ ಜಗತ್ತಿನೆಲ್ಲೆಡೆ ಸಾವಿನ ಸಂಖ್ಯೆ ಶರವೇಗದಲ್ಲಿ ಸಾಗುತ್ತಿದ್ದರೆ, ಚೀನಾದಲ್ಲಿ ಮಾತ್ರ ಗುಣಮುಖರಾಗುತ್ತಿದ್ದವರ ಸಂಖ್ಯೆ ಶರವೇಗದಲ್ಲಿ ಸಾಗುತ್ತಿತ್ತು.
ಆದ್ರೆ ಈಗ ಚೀನಾದಲ್ಲಿ ಈಗ ಮತ್ತೆ ಭೀತಿ ಶುರುವಾಗಿದೆ. ಕೊರೊನಾ ತನ್ನ ಎರಡನೇ ಶಕೆ ಆರಂಭಗೊಳಿಸಿರುವುದು ಪಕ್ಕಾ ಆಗಿದೆ. ಇದಕ್ಕೆ ಕಾರಣ ಕಳೆದ ದಿನ ದೇಶದಲ್ಲಿ ಪತ್ತೆಯಾದ ಹೊಸ ಸೋಂಕಿತರು. ಭಾನುವಾರ ಒಂದೇ ದಿನ ಚೀನಾದಲ್ಲಿ 108 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇದು ಕಡಿಮೆಯೇನಲ್ಲ. ಕಳೆದ ಆರು ವಾರಗಳಲ್ಲಿ ದಾಖಲಾದ ಅತಿ ಹೆಚ್ಚು ಸೋಂಕಿತರ ಪ್ರಮಾಣ. ಶನಿವಾರಕ್ಕಿಂತ 99 ಸೋಂಕಿತರು ಹೆಚ್ಚು. ಅದಕ್ಕಿಂತ ಹಿಂದೆ ಪ್ರತಿನಿತ್ಯ ಒಂದಂಕಿಯಲ್ಲಿರುತ್ತಿದ್ದ ಹೊಸ ಸೋಂಕಿತರ ಸಂಖ್ಯೆ ದಿಢೀರ್ ಆಗಿ ಮೂರಂಕಿ ದಾಟಿದ್ದು ಪಾಶ್ಚಿಮಾತ್ಯರನ್ನು ಸಹಜವಾಗಿಯೇ ಭೀತಿಗೊಳಗಾಗುವಂತೆ ಮಾಡಿದೆ.
ಈ ಭಾನುವಾರ ಹೊರತುಪಡಿಸಿ ಇತ್ತೀಚೆಗೆ ಚೀನಾದಲ್ಲಿ ದಾಖಲಾದ ಅತಿ ಹೆಚ್ಚು ಹೊಸ ಸೋಂಕಿತರ ಸಂಖ್ಯೆ 143. ಅದು ಕಳೆದ ಮಾರ್ಚ್ 5ರಂದು ದಾಖಲಾಗಿತ್ತು.
ಚೀನಾ ಆರೋಗ್ಯ ಇಲಾಖೆ ಹೇಳುವಂತೆ ಈ ಹೊಸ ಪ್ರಕರಣಗಳಲ್ಲಿ ಹೆಚ್ಚಿನವು ವಿದೇಶಿಗರಿಂದ ಬಂದಿದ್ದಂತೆ. 108ರಲ್ಲಿ 98 ಹೊಸ ಪ್ರಕರಣಗಳು ಬೇರೆ ದೇಶಗಳಿಂದ ಚೀನಾಗೆ ಬಂದವರಿಂದ ದಾಖಲಾಗಿದ್ದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏನೇ ಆದ್ರೂ ಚೀನಾದಲ್ಲಿ ಒಮ್ಮೆ ನಿಂತಿದ್ದ ಕೊರೊನಾ ಸೋಂಕು ಮತ್ತೆ ಉಲ್ಬಣಗೊಂಡಂತೆ ಕಾಣುತ್ತಿದೆ. ಚೀನಾ ಮತ್ತೆ ಹೆಚ್ಚು ಜಾಗರೂಕವಾಗಬೇಕಿದೆ. ಅಷ್ಟೇ ಅಲ್ಲ, ಎಲ್ಲಾ ಚೀನಾದಲ್ಲಿ. ನಮ್ಮ ದೇಶಕ್ಕೆ ಏನೂ ಆಗಲ್ಲ ಅಂದ್ರೆ, ಅಪಾಯವನ್ನು ನಾವೇ ಮೈಮೇಲೆ ಎಳೆದುಕೊಂಡಂತಾಗುತ್ತದೆ. ಹೆಚ್ಚು ಜಾಗರೂಕರಾಗದಿದ್ದರೆ ಚೀನಾದ ಪರಿಸ್ಥಿತಿ ನಮ್ಮಲ್ಲೂ ಆಗಬಹುದು.