ರಿಯಾದ್/ನವದೆಹಲಿ: ಭಾರತಕ್ಕೆ ಅತಿಹೆಚ್ಚು ತೈಲ ರಫ್ತು ಮಾಡುವ ದೇಶ ಸೌದಿ ಅರೇಬಿಯಾ ಇದೀಗ ದೊಡ್ಡಮಟ್ಟದ ದೀರ್ಘಕಾಲಿಕ ಹೂಡಿಕೆಗೆ ಮುಂದಾಗಿದೆ.
ಭಾರತದ ಬೆಳವಣಿಗೆ ಹಾಗೂ ಹೂಡಿಕೆಗೆ ಇರುವ ಸಕಾರಾತ್ಮಕ ವಾತಾವರಣದ ಹಿನ್ನೆಲೆಯಲ್ಲಿ ಪೆಟ್ರೋಕೆಮಿಕಲ್ಸ್, ಮೂಲಸೌಕರ್ಯ ಮತ್ತು ಗಣಿಗಾರಿಕೆ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸೌದಿ ಅರೇಬಿಯಾ ಸುಮಾರು ನೂರು ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಚಿಂತನೆ ನಡೆಸಿದೆ.
ಇಂಧನ, ರಿಫೈನಿಂಗ್, ಪೆಟ್ರೋಕೆಮಿಕಲ್ಸ್, ಮೂಲಸೌಕರ್ಯ, ಕೃಷಿ, ಮಿನರಲ್ಸ್ ಹಾಗೂ ಗಣಿಗಾರಿಕೆ ವಲಯಗಳಲ್ಲಿ ಹೂಡಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಸೌದಿ ಅರೇಬಿಯಾದ ರಾಯಭಾರಿ ಡಾ. ಸೌದ್ ಬಿನ್ ಮೊಹಮ್ಮದ್ ಅಲ್ ಸತಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುವ ವೇಳೆಯಲ್ಲೇ ಉಭಯ ದೇಶಗಳಲ್ಲಿ 40 ವಿವಿಧ ಸಹಭಾಗಿತ್ವದ ಯೋಜನೆಯನ್ನು ಸದ್ಯ ಗುರುತಿಸಲಾಗಿದೆ ಎಂದು ಅಲ್ ಸತಿ ಮಾಹಿತಿ ನೀಡಿದ್ದಾರೆ.
ಭಾರತದ ತೈಲೋದ್ಯಮದಲ್ಲಿ ಸೌದಿ ಪಾಲು ಅತಿಹೆಚ್ಚು ಇದ್ದು, ಶೇ.17ರಷ್ಟು ಕಚ್ಚಾ ತೈಲ ಹಾಗೂ ಶೇ.32ರಷ್ಟು ಎಲ್ಪಿಜಿ ಅಗತ್ಯತೆಯನ್ನು ರಫ್ತು ಮಾಡುತ್ತಿದೆ.
ಕೆಲವು ತಿಂಗಳ ಹಿಂದೆ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಪಾಕ್ ಪ್ರವಾಸ ಕೈಗೊಂಡು ಕೆಲ ಒಪ್ಪಂದಗಳಿಗೆ ಸಹಿ ಹಾಕಿದ್ದಲ್ಲದೆ, ಪಾಕಿಸ್ತಾನಕ್ಕೆ ಹಣಕಾಸಿನ ನೆರವನ್ನೂ ನೀಡುವುದಾಗಿ ಹೇಳಿದ್ದರು. ಆದರೆ ಸದ್ಯದ ಭಾರತದಲ್ಲಿನ ಹೂಡಿಕೆ ಆ ಒಪ್ಪಂದಕ್ಕಿಂತ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.