ಮಾಸ್ಕೋ(ರಷ್ಯಾ): ಎಲ್ಲೆಡೆ ವ್ಯಾಪಿಸುತ್ತಿರುವ ಕೋವಿಡ್-19 ನಿಯಂತ್ರಿಸುವ ಸಲುವಾಗಿ ರಷ್ಯಾ ಸರ್ಕಾರ ಸೋಮವಾರದಿಂದ ತನ್ನೆಲ್ಲಾ ಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡುವ ನಿರ್ಧಾರ ಕೈಗೊಂಡಿದೆ.
ವಿದೇಶಗಳಿಂದ ಯಾವುದೇ ಹೊಸ ಸೋಂಕು ಹರಡದಂತೆ ತಡೆಯುವ ಸಲುವಾಗಿ ರಷ್ಯಾ ತನ್ನೆಲ್ಲಾ ರಾಷ್ಟ್ರೀಯ ಗಡಿಗಳನ್ನು ಬಂದ್ ಮಾಡುವ ನಿರ್ಧಾರ ಕೈಗೊಂಡಿದೆ ಎಂದು ರಷ್ಯಾ ಸರ್ಕಾರಿ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ರಷ್ಯಾದ ರಾಜತಾಂತ್ರಿಕರು ಹಾಗೂ ಟ್ರಕ್ ಡ್ರೈವರ್ಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಜೊತೆಗೆ, ಉಕ್ರೇನಿಯನ್, ಡೊನೆಟ್ಸ್ಕ್ ಮತ್ತು ಲುಗಾನ್ಸ್ಕ್ ನ ಪ್ರದೇಶಗಳಲ್ಲಿ ವಾಸಿಸುವ ರಷ್ಯಾದ ನಾಗರಿಕರಿಗೆ ಗಡಿ ದಾಟಲು ಅನುಮತಿ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಈವರೆಗೂ ರಷ್ಯಾದಲ್ಲಿ 1,264 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಮತ್ತು ನಾಲ್ಕು ಸಾವುಗಳು ದಾಖಲಾಗಿವೆ ಎಂದು ಆರೋಗ್ಯ ಅಧಿಕಾರಿಗಳು ಶನಿವಾರದ ಅಧಿಕೃತ ಮಾಹಿತಿ ನೀಡಿದ್ದಾರೆ.