ನವದೆಹಲಿ: ಜಗತ್ತಿಗೆ ಕೋವಿಡ್ ರೂಪಾಂತರಿ ಒಮಿಕ್ರೋನ್ ಕಂಠಕವಾಗುವ ಮುನ್ಸೂಚನೆ ಬೆನ್ನಲ್ಲೇ ಹಲವು ರಾಷ್ಟ್ರಗಳು ಭಾರಿ ಅಲರ್ಟ್ ಆಗುತ್ತಿವೆ. ರಷ್ಯಾದ ಗಮಲೇಯ ಇನ್‌ಸ್ಟಿಟ್ಯೂಟ್ ಒಮಿಕ್ರೋನ್ ವೈರಸ್ ಪರಿಣಾಮಕಾರಿಯಾಗುವಂತೆ ಸ್ಪುಟ್ನಿಕ್ ವಿ ಲಸಿಕೆಯನ್ನು ಮಾರ್ಪಡಿಸುವ ಕೆಲಸವನ್ನು ಆರಂಭಿಸಿರುವುದಾಗಿ ಮೂಲಗಳು ತಿಳಿಸಿವೆ.
ಗಮಲೇಯ ಇನ್‌ಸ್ಟಿಟ್ಯೂಟ್ ತನ್ನ ಲಸಿಕೆಗಳಾದ ಸ್ಪುಟ್ನಿಕ್ ವಿ ಹಾಗೂ ಸ್ಪುಟ್ನಿಕ್ ಲೈಟ್ ಒಮಿಕ್ರೋನ್ ರೂಪಾಂತರವನ್ನು ತಟಸ್ಥಗೊಳಿಸುತ್ತದೆ. ಜೊತೆಗೆ ಅಗತ್ಯವಿರುವ ಅಧ್ಯಯನಗಳನ್ನು ಪ್ರಾರಂಭಿಸಿದೆ ಎಂದು ವರದಿಯಾದೆ. ಏಕೆಂದರೆ ಇವೆರಡೂ ಲಸಿಕೆಗಳು ಈವರೆಗೆ ಪತ್ತೆಯಾಗಿರುವ ಎಲ್ಲ ಕೋವಿಡ್ ರೂಪಾಂತರಿ ವೈರಸ್‌ಗಳ ವಿರುದ್ಧ ಹೆಚ್ಚು ಪರಿಣಾಮಕಾರಿ ಎಂಬುದು ತಿಳಿದು ಬಂದಿದೆ.
ಒಮಿಕ್ರೋನ್ ರೂಪಾಂತರದ ವಿರುದ್ಧ ಸ್ಪುಟ್ನಿಕ್ ಲಸಿಕೆಗಳ ಪರಿಣಾಮಕಾರಿ ಬಗ್ಗೆ ವಿಶ್ವಾಸವಿದ್ದರೂ, ಲಸಿಕೆ ಅಭಿವೃದ್ಧಿಗಾಗಿ ಅಸ್ತಿತ್ವದಲ್ಲಿರುವ ಪ್ರೋಟೋಕಾಲ್‌ಗಳ ಪ್ರಕಾರ ಸ್ಪುಟ್ನಿಕ್ ಲಸಿಕೆಯ ಹೊಸ ಆವೃತ್ತಿಯನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಈಗಾಗಲೇ ಪ್ರಾರಂಭಿಸಿದೆ ಎಂದು ಅಲ್ಲಿನ ಸರ್ಕಾರಿ ಸ್ವಾಮ್ಯದ ರಷ್ಯಾದ ಲಸಿಕೆ ಅಭಿವೃದ್ಧಿ ಸಂಸ್ಥೆ ಹೇಳಿದೆ.
ಮುನ್ನೆಚ್ಚರಿಕೆ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಹೊಸ ರೂಪಾಂತರಿ ವೈರಸ್ ಪತ್ತೆ ಬಗ್ಗೆ ದಕ್ಷಿಣ ಆಫ್ರಿಕಾ ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ನೀಡಿತ್ತು. ಇದನ್ನು ಆಧರಿಸಿ ಒಮಿಕ್ರೋನ್ ರೂಪಾಂತರಿ ಬಗ್ಗೆ ಎಚ್ಚರ ವಹಿಸುವಂತೆ ಎಲ್ಲಾ ದೇಶಗಳಿಗೆ ಡಬ್ಲ್ಯೂಹೆಚ್‌ಒ ಸೂಚಿಸಿತ್ತು. ವಿದೇಶಿ ಪ್ರಯಾಣಿಕರ ಮೇಲೆ ನಿರ್ಬಂಧ, ವೈರಸ್ ಹರಡುವಿಕೆ ಪತ್ತೆಹಚ್ಚುವುದು ಹಾಗೂ ನಿಯಂತ್ರಿಸುವ ಬಗ್ಗೆ ಕಣ್ಗಾವಲು ಇರಿಸುವಂತೆಯೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು.
ಇನ್ನು, ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ರೂಪಾಂತರಿ ವೈರಸ್ ಒಮಿಕ್ರೋನ್ ನಿಭಾಯಿಸುವ ಬಗ್ಗೆ ಕಳೆದ ಶನಿವಾರ ಉನ್ನತ ಮಟ್ಟದ ಪರಿಶೀಲನ ಸಭೆ ನಡೆಸಿದ್ದರು. ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ವೈರಸ್ ದೇಶದಲ್ಲಿ ಹರಡದಂತೆ ಕ್ರಮಕ್ಕೂ ಸೂಚಿಸಿದ್ದರು.
ಅಲ್ಲದೇ, ಇಂದಿಗೆ ವಾಣಿಜ್ಯ ವಿಮಾನಗಳ ಮೇಲೆ ವಿಧಿಸಿರುವ ನಿರ್ಬಂಧ ತೆರವಾಗುತ್ತಿರುವುದರಿಂದ ನಿಷೇಧವನ್ನು ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಹೇಳಿದ್ದರು. ಈಗಾಗಲೇ ಕೆಲ ರಾಜ್ಯಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವೈರಸ್ ಪತ್ತೆಹಚ್ಚಲು ಹೆಚ್ಚುವರಿ ಪರೀಕ್ಷೆಗಳಿಗೆ ಮುಂದಾಗಿವೆ.
ಇದನ್ನೂ ಓದಿ: ಒಮಿಕ್ರಾನ್ ಭೀತಿ.. ಮುಂಜಾಗ್ರತಾ ಕ್ರಮ, ಚಟುವಟಿಕೆ ನಿರ್ಬಂಧ ಕುರಿತು ಇಂದು ನಿರ್ಧಾರ- ಸಚಿವ ಸುಧಾಕರ್