ಮೆಡನ್(ಇಂಡೋನೇಷ್ಯಾ): ನಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಉಂಟಾಗಿದೆ. ಸುಮಾರು 2,700ಕ್ಕೂ ಅಧಿಕ ಮನೆಗಳು ನೆರೆಗೆ ಸಿಲುಕಿದ್ದು, ಕನಿಷ್ಠ ಇಬ್ಬರು ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಸುಮಾತ್ರಾದಲ್ಲಿ ಆರು ಮಂದಿ ಕಾಣೆಯಾಗಿದ್ದು, ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹಲವಾರು ಪ್ರದೇಶಗಳಲ್ಲಿ ನೀರಿನ ಮಟ್ಟ 5 ಮೀಟರ್ಗಿಂತಲೂ ಹೆಚ್ಚಿದ್ದು, ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಹಲವೆಡೆ ಭೂ ಕುಸಿತ ಉಂಟಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ.
ಈ ಮಧ್ಯೆ ನಿರಾಶ್ರಿತರ ಕೇಂದ್ರದಲ್ಲಿರುವ ಜನರು, ಟಿವಿ, ಉತ್ತಮ ಆಹಾರ, ಹೊಸ ಬಟ್ಟೆ ಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. ಈ ವರ್ಷದ ಆರಂಭದಲ್ಲಿ ಜಕಾರ್ತಾದಲ್ಲಿ ಸಂಭವಿಸಿದ ಪ್ರವಾಹ ಹಾಗೂ ಭೂ ಕುಸಿತ 60 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು. ಆ ಘಟನೆ ಮರುಕಳಿಸುತ್ತಾ ಅನ್ನೋ ಆತಂಕ ಸಾರ್ವಜನಿಕರದ್ದಾಗಿದೆ.