ಕಠ್ಮಂಡು( ನೇಪಾಳ): ನೇಪಾಳದ ರಾಜಕೀಯ ಹಗ್ಗಜಗ್ಗಾಟದ ಮಧ್ಯೆ, ಆಡಳಿತ ಕಮ್ಯುನಿಸ್ಟ್ ಪಕ್ಷದ ಕಾರ್ಯನಿರ್ವಾಹಕ ಅಧ್ಯಕ್ಷ ಪುಷ್ಪ ಕಮಲ್ ದಹಲ್ 'ಪ್ರಚಂಡ' ಅವರು ಯಾವುದೇ ಕಾರಣಕ್ಕೂ ಪಕ್ಷ ವಿಭಜನೆಗೆ ಅನುವು ಮಾಡಿ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ವಾಸಸ್ಥಳವಾದ ಚಿಟ್ವಾನ್‌ನಲ್ಲಿ ನೇಪಾಳ ಕಮ್ಯುನಿಸ್ಟ್ ಪಕ್ಷದ (ಎನ್‌ಸಿಪಿ) ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಪ್ರಚಂಡ, ಪಕ್ಷದ ಏಕತೆಯನ್ನು ಹಾಗೇ ಉಳಿಸಿಕೊಳ್ಳುವ ದೃಢ ನಿರ್ಧಾರ ವ್ಯಕ್ತಪಡಿಸಿದರು. ಅಲ್ಲದೇ, ಕಮ್ಯುನಿಸ್ಟ್ ಪಕ್ಷದ ಏಕತೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವು ಕೊರೊನಾ ವೈರಸ್ ಸಾಂಕ್ರಾಮಿಕದ ವಿರುದ್ಧದ ಹೋರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಮತ್ತು ನೈಸರ್ಗಿಕ ವಿಪತ್ತುಗಳಿಗೆ ಕಾರಣವಾಗುತ್ತವೆ ಎಂದು ಭಾನುವಾರ ಹೇಳಿದ್ದಾರೆ.
"ದೊಡ್ಡ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು, ವಿವಾದಗಳು ಮತ್ತು ಚರ್ಚೆಗಳು ನಡೆಯುವುದು ಸಹಜ. ಆದರೆ, ಪಕ್ಷವನ್ನು ವಿಭಜಿಸಲು ನಾನು ಅನುಮತಿಸುವುದಿಲ್ಲ. ಪಕ್ಷದಲ್ಲಿ ವಿವಾದವಿದ್ದರೆ, ಅದನ್ನು ಪರಿಹರಿಸಲು ಸರಿಯಾದ ಕಾರ್ಯವಿಧಾನಗಳಿವೆ." " ಎಂದು ಅವರು ಹೇಳಿದ್ದಾರೆ.