ಬೀಟ್ ಹನಿನಾ (ಪೂರ್ವ ಜೆರುಸಲೆಮ್): ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಜಾರಿಗೆ ಬರುತ್ತಿದ್ದಂತೆ ಪೂರ್ವ ಜೆರುಸಲೆಮ್ ಪಕ್ಕದ ಬೀಟ್ ಹನಿನಾದಲ್ಲಿ ಪ್ಯಾಲೆಸ್ತೇನಿಯನ್ನರು ಜಮಾಯಿಸಿ ಸಂಭ್ರಮಾಚರಣೆ ನಡೆಸಿದರು.
ಜನರು ಪ್ಯಾಲೆಸ್ತೇನಿಯನ್ ಹಾಗೂ ಹಮಾಸ್ ಧ್ವಜಗಳನ್ನು ಹಿಡಿದು ಸಂಭ್ರಮಾಚರಣೆ ನಡೆಸಿದರು ಮತ್ತು ಆಗಸದಲ್ಲಿ ವರ್ಣರಂಜಿತ ಪಟಾಕಿ ಸಿಡಿಸಲಾಯಿತು. ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಜಾರಿಗೆ ಬಂರುತ್ತಿದ್ದಂತೆ ಗಾಜಾ ನಗರದಾದ್ಯಂತ ಚೀರ್ಸ್ ಮತ್ತು ಸೀಟಿಗಳು ಮೊಳಗಿದವು. 11 ದಿನಗಳ ಸಂಘರ್ಷದ ನಂತರ ಯುದ್ಧ ನಿಂತ ಖುಷಿಗೆ ಗಾಜಾ ಪಟ್ಟಿಯಾದ್ಯಂತ, ನಿವಾಸಿಗಳು ಬೀದಿಗಿಳಿದು ಸಂಭ್ರಮಾಚರಣೆ ನಡೆಸಿದರು.
ಹಿಂಸಾಚಾರವನ್ನು ಕೊನೆಗೊಳಿಸುಂತೆ ಈಜಿಪ್ಟ್ ಪ್ರಸ್ತಾಪವನ್ನು ಇಸ್ರೇಲ್ ಮತ್ತು ಹಮಾಸ್ ಎರಡೂ ಒಪ್ಪಿಕೊಂಡ ನಂತರ ಕದನ ವಿರಾಮ ಪ್ರಾರಂಭವಾಯಿತು.
ಘರ್ಷಣೆಯ ಸಂದರ್ಭದಲ್ಲಿ 65 ಮಕ್ಕಳು ಮತ್ತು 39 ಮಹಿಳೆಯರು ಸೇರಿದಂತೆ ಕನಿಷ್ಠ 230 ಪ್ಯಾಲೆಸ್ತೇನಿಯನ್ ಜನರು ಸಾವನ್ನಪ್ಪಿದ್ದು, 1,710 ಜನರು ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.
ಇಸ್ರೇಲ್‌ನಲ್ಲಿ ಐದು ವರ್ಷದ ಬಾಲಕ ಮತ್ತು 16 ವರ್ಷದ ಬಾಲಕಿ ಸೇರಿದಂತೆ 12 ಜನರು ಸಾವನ್ನಪ್ಪಿದ್ದಾರೆ.
ರಷ್ಯಾ ಸ್ವಾಗತ: ಎರಡೂ ಕಡೆ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದನ್ನ ರಷ್ಯಾ ಸ್ವಾಗತಿಸಿದೆ. ಈ ಸಂಬಂಧ ಮಾತನಾಡಿದ ರಷ್ಯಾ ವಿದೇಶಾಂಗ ಸಚಿವ ಮಾರಿಯಾ ಜಖರೋವ್, ಇಸ್ರೇಲ್ - ಪ್ಯಾಲಿಸ್ತೀನ್ ನಡುವೆ ಈಗ ಆಗಿರುವ ಒಪ್ಪಂದ ಸ್ವಾಗತಾರ್ಹ, ಆದರೆ ಇದು ಇಷ್ಟೇ ಆದರೆ ಸಾಲದು, ಈ ಭಾಗದಲ್ಲಿ ಸಂಪೂರ್ಣ ಶಾಂತಿ ನೆಲಸಬೇಕಿದೆ ಎಂದು ಹೇಳಿದ್ದಾರೆ.