ಇಸ್ಲಾಮಾಬಾದ್(ಪಾಕಿಸ್ತಾನ): ಅಕ್ರಮವಾಗಿ ಕಚ್ಚಾ ತೈಲ ವ್ಯವಹಾರ ನಡೆಸುವ ಮೂಲಕ ಪಾಕಿಸ್ತಾನದ ನಿವೃತ್ತ ಜನರಲ್ ತಮ್ಮ ದೇಶದ ಖಜಾನೆಗೆ ದಿನಕ್ಕೆ ಸುಮಾರು 20 ಮಿಲಿಯನ್ ರೂಪಾಯಿ ನಷ್ಟವಾಗುವಂತೆ ಮಾಡುತ್ತಿದ್ದಾರೆ ಎಂಬ ಆರೋಪದ ದೂರಿನ ತನಿಖೆಯನ್ನು ಪಾಕಿಸ್ತಾನದ ಭ್ರಷ್ಟಾಚಾರ ವಿರೋಧಿ ಸಂಸ್ಥೆಯಾದ ಎನ್ಎಬಿ(National Accountability Bureau) ಆರಂಭಿಸಿದೆ.
ನಿವೃತ್ತ ಜನರಲ್ ಅಹ್ಸಾನ್ ಸಲೀಂ ಹಯಾತ್ ಮತ್ತು ಲಾಜಿಸ್ಟಿಕ್ಸ್ ಕಂಪನಿಯೊಂದರ ಹಿರಿಯ ಅಧಿಕಾರಿಗಳ ವಿರುದ್ಧ ಮಾಜಿ ಸೇನಾಧಿಕಾರಿಯಾದ ಅಕ್ರಂ ರಾಝಾ ಆರೋಪ ಮಾಡಿದ್ದಾರೆ. ಇದೇ ಪ್ರಕರಣದ ತನಿಖೆಯನ್ನು ಎನ್ಎಬಿ ಈಗ ಆರಂಭಿಸಿದೆ. ಅಕ್ರಂ ರಾಝಾ ಅವರು ನಿವೃತ್ತ ಮೇಜರ್ ಆಗಿದ್ದಾರೆ.
ಅಕ್ರಂ ರಾಝಾ ಅವರು ಸಲ್ಲಿಸಿದ್ದ ದೂರಿನಲ್ಲಿರುವ ದಾಖಲೆಗಳ ಪ್ರಕಾರ ಇಬ್ಬರು ಲೆಫ್ಟಿನೆಂಟ್ ಕರ್ನಲ್‌ಗಳು, ಮೂವರು ಮೇಜರ್‌ಗಳು, ವಿವಿಧ ಶ್ರೇಣಿಯ ಆರು ಸೈನಿಕರು ಮತ್ತು ನಾಲ್ವರು ನಾಗರಿಕರು ಸೇರಿದಂತೆ 17 ವ್ಯಕ್ತಿಗಳು ಈ ತೈಲ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಜನವರಿ 26, 2005ರಂದು ಅವರನ್ನು ವಜಾಗೊಳಿಸಲಾಗಿದೆ. ಆದರೆ ಮುಖ್ಯ ಆರೋಪಿಯಾದ ನಿವೃತ್ತ ಜನರಲ್ ಅಹ್ಸಾನ್ ಸಲೀಂ ಹಯಾತ್ ಅವರನ್ನು ವಜಾಗೊಳಿಸಿಲ್ಲ ಎಂದು ಉಲ್ಲೇಖಿಸಲಾಗಿದೆ.
ಅಪರಾಧಿಗಳನ್ನು ಬಂಧಿಸದೇ, ಈ ಹಗರಣವನ್ನು ಬಹಿರಂಗಪಡಿಸಿದ ವ್ಯಕ್ತಿಗಳನ್ನು ಯಾವುದೇ ಕಾರಣ ನೀಡದೇ ಬಂಧಿಸಲಾಗಿದೆ. ರಾಷ್ಟ್ರೀಯ ಲಾಜಿಸ್ಟಿಕ್ಸ್ ಸೆಲ್ (ಎನ್‌ಎಲ್‌ಸಿ) ಕಚ್ಚಾ ತೈಲ ಅವ್ಯವಹಾರ ನಡೆಸುತ್ತಿರುವ ಮಾಫಿಯಾಗೆ ಸಹಕರಿಸುವಂತೆ ತನ್ನ ಮೇಲೆ ಒತ್ತಡ ಹೇರುತ್ತಲೇ ಇತ್ತು. ನಾನು ನಿರಾಕರಿಸಿದ ಕಾರಣದಿಂದ ಗಂಭೀರ ಬೆದರಿಕೆಗಳನ್ನು ಹಾಕಲಾಗಿದೆ ಎಂದು ಅಕ್ರಂ ರಾಝಾ ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್ನ ಮನೆಗಳಲ್ಲಿ ರಷ್ಯಾ ಸೈನಿಕರಿಂದ ಆಹಾರ ಕಳ್ಳತನ: ಸುಮಿ ಗವರ್ನರ್
ಇದಾದ ನಂತರ ಎನ್ಎಬಿ ಸಂಸ್ಥೆಯ ಅಧ್ಯಕ್ಷರನ್ನು ಅಕ್ರಂ ರಾಝಾ ಸಂಪರ್ಕಿಸಿದ್ದರು. ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಶಾಹಿದ್ ಮೆಹಮೂದ್ ಅಬ್ಬಾಸಿ ಮತ್ತು ನ್ಯಾಯಮೂರ್ತಿ ತಾರಿಕ್ ಅಬ್ಬಾಸಿ ಅವರನ್ನೊಳಗೊಂಡ ಲಾಹೋರ್ ಹೈಕೋರ್ಟ್ ಪೀಠವು ಕಾನೂನಿನ ಪ್ರಕಾರ ದೂರಿನ ಮೇಲೆ ಮುಂದುವರಿಯಲು ಎನ್ಎಬಿಗೆ ನಿರ್ದೇಶನ ನೀಡಿತ್ತು. ಈಗ ಎನ್ಎಬಿ ತನಿಖೆ ಆರಂಭಿಸಿದೆ.