ಲಾಹೋರ್: ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬೀಳುವವರೆಗೂ ಭಾರತೀಯ ವಿಮಾನಗಳಿಗೆ ಪಾಕಿಸ್ತಾನದ ವಾಯು ಗಡಿ ಪ್ರವೇಶದ ನಿರ್ಬಂಧವನ್ನು ಮುಂದುವರಿಸಲು ಪಾಕ್ ನಿರ್ಧರಿಸಿದೆ.
ಫೆಬ್ರವರಿ 26ರ ಬಾಲ್ಕೋಟ್ನಲ್ಲಿನ ಜೈಶ್- ಇ- ಮೊಹಮ್ಮದ್ (ಜೆಎಂ) ಉಗ್ರರ ತರಬೇತಿ ಶಿಬಿರದ ಮೇಲೆ ಭಾರತೀಯ ವಾಯುಪಡೆ ನಡೆಸಿದ್ದ ಏರ್ಸ್ಟ್ರೈಕ್ ಬಳಿಕ ಪಾಕ್, ಭಾರತದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಆದರೆ, ಮಾರ್ಚ್ 27ರಿಂದ ದೆಹಲಿ, ಕೌಲಾಲಾಂಫುರ್ ಮತ್ತು ಬ್ಯಾಂಕಾಕ್ ಹೊರತು ಉಳಿದೆಲ್ಲ ಪ್ರದೇಶಗಳಿಗೆ ಸಾಗುವ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಕ್ತವಾಗಿಸಿದೆ.
ಭಾರತೀಯ ಸಾರಿಗೆ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ತೆರೆಯುವ ಸಂಬಂಧ ಭದ್ರತಾ ಮತ್ತು ವಾಯುಯಾನ ಸಚಿವಾಲಯದ ಉನ್ನತ ಅಧಿಕಾರಿಗಳು ಇಂದು ಮರುಪರಿಶೀಲನೆ ಸಭೆ ನಡೆಸಿದರು. ಲೋಕಸಭೆ ಚುನಾವಣೆಯ ಫಲಿತಾಂಶ ನೋಡಿಕೊಂಡು ಮೇ 30ರವರೆಗೆ ಭಾರತೀಯ ವಿಮಾನಗಳಿಗೆ ಮುಕ್ತಗೊಳಿಸದಿರಲು ನಿರ್ಧರಿಸಲಾಗಿದೆ ಎಂದು ಇಲ್ಲಿನ ಹಿರಿಯ ಅಧಿಕಾಯೊಬ್ಬರು ತಿಳಿಸಿದ್ದಾರೆ.
ನಾಗರಿಕ ವಿಮಾಯಾನ ಪ್ರಾಧಿಕಾರವು ವಿಮಾನ ಚಾಲಕರಿಗೆ ಈ ತೀರ್ಮಾನದ ಕುರಿತು ವಿವರಿಸಿದೆ. ಸಭೆಯ ಬಳಿಕ ಪೈಲಟ್ಗಳಿಗೆ ಈ ಬಗ್ಗೆ ನೋಟಿಸ್ ಜಾರಿಗೊಳಿಸಲಾಗಿದೆ. ಮೇ 30ರಂದು ಪಾಕಿಸ್ತಾನ ಈ ಸಂಬಂಧ ಮತ್ತೆ ಸಭೆ ಕರೆಯಲಿದ್ದು, ಅಂದು ಈ ಕುರಿತು ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.