ಇಸ್ಲಾಮಾಬಾದ್: ಉಗ್ರಗಾಮಿ ಸಂಘಟನೆಯಾದ ತೆಹ್ರಿಕ್-ಇ-ಲಬ್ಬೈಕ್(ಟಿಎಲ್ಪಿ) ಪಾಕಿಸ್ತಾನ ಸಂಘಟನೆಯ ಮೇಲಿನ ನಿಷೇಧವನ್ನು ಪ್ರಧಾನಮಂತ್ರಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಹಿಂಪಡೆದಿದೆ. ಈ ಮೂಲಕ ಉಗ್ರ ಪಟ್ಟಿಯಲ್ಲಿರುವ ಸಂಘಟನೆಯ ಒತ್ತಡಕ್ಕೆ ಸರ್ಕಾರ ಮಣಿದಂತಾಗಿದೆ.
ಇತ್ತೀಚೆಗೆ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯ ವೇಳೆ 10 ಪೊಲೀಸರು ಸೇರಿದಂತೆ 20 ಜನರ ಸಾವಿಗೆ ಕಾರಣವಾಗಿದ್ದ ಸಂಘಟನೆಯನ್ನು ನಿಷೇಧಿತ ಪಟ್ಟಿಗೆ ಸೇರಿಸಲಾಗಿತ್ತು. ಆದರೆ ಇದೀಗ ಸರ್ಕಾರ ನಿಷೇಧವನ್ನು ತೆರವುಗೊಳಿಸಿದೆ.
ಫ್ರಾನ್ಸ್ನಲ್ಲಿ ಇಸ್ಲಾಂ ಧರ್ಮ ಕುರಿತು ನಿಂದನಾತ್ಮಕ ಕಾರ್ಟೂನ್ಗಳನ್ನು ಪ್ರಕಟಿಸಲಾಗಿದೆ ಎಂಬ ಆರೋಪದ ಮೇಲೆ ಪಾಕಿಸ್ತಾನದ ಫ್ರೆಂಚ್ ರಾಯಭಾರಿಯನ್ನು ದೇಶದಿಂದ ಹೊರಹಾಕಬೇಕು ಎಂದು ಸಂಘಟನೆಯ ನೇತೃತ್ವದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ನಡೆದ ಹಿಂಸಾಚಾರದಲ್ಲಿ 10 ಪೊಲೀಸರು ಸೇರಿದಂತೆ 20 ಜನರು ಮೃತಪಟ್ಟಿದ್ದರು. ಏಪ್ರಿಲ್ನಲ್ಲಿ ಟಿಎಲ್ಪಿಯನ್ನು ನಿಷೇಧಿತ ಸಂಘಟನೆ ಎಂದು ಪಾಕಿಸ್ತಾನ ಸರ್ಕಾರವೇ ಘೋಷಿಸಿತ್ತು.
ಈ ಮಧ್ಯೆ ಸರ್ಕಾರ, ಸಂಘಟನೆಯ ಜೊತೆ ರಹಸ್ಯ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಔಪಚಾರಿಕವಾಗಿ ಸಂಘಟನೆಗೆ ನೋಟಿಸ್ ಜಾರಿ ಮಾಡಿ ಇನ್ನು ಮುಂದೆ ದೇಶದ ಕಾನೂನು ಮತ್ತು ಗೌರವಕ್ಕೆ ಧಕ್ಕೆ ತರದಂತೆ ಸೂಚನೆ ನೀಡಿದೆ. ಅಲ್ಲದೇ, ಟಿಎಲ್ಪಿ ಕೂಡ ಭವಿಷ್ಯದಲ್ಲಿ ದೇಶದ ಕಾನೂನನ್ನು ಅನುಸರಿಸಲಾಗುವುದು ಎಂದು ಒಪ್ಪಿಕೊಂಡಿದೆ.
ಟಿಎಲ್ಪಿ ಕಾರ್ಯಕರ್ತರು ಮತ್ತು ಸರ್ಕಾರದ ವಿರುದ್ಧ ಆಗಾಗ್ಗೆ ತಿಕ್ಕಾಟ ನಡೆಯುತ್ತಿತ್ತು. ಇತ್ತೀಚೆಗೆ ಫ್ರಾನ್ಸ್ ರಾಯಭಾರಿಯ ವಿರುದ್ಧದ ಪ್ರತಿಭಟನೆಯಲ್ಲಿ ಸಂಘಟನೆಯ ಕಾರ್ಯಕರ್ತರು ಭಾರೀ ಹಿಂಸಾಚಾರ ನಡೆಸಿದ್ದರು. ಇದರಿಂದ ಪೊಲೀಸರು ಸೇರಿದಂತೆ ನಾಗರಿಕರೂ ಬಲಿಯಾಗಿದ್ದರು. ಅಲ್ಲದೇ ಸರ್ಕಾರದ ಬಂಧನದಲ್ಲಿದ್ದ ಸಂಘಟನೆಯ ಸಾದ್ ರಿಜ್ವಿ ಎಂಬಾತನನ್ನೂ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿತ್ತು.
ಆದರೆ, ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಸಂಘಟನೆಯನ್ನು ನಿಷೇಧಿತ ಪಟ್ಟಿಗೆ ಸೇರಿಸಿತ್ತು. ಇದರ ವಿರುದ್ಧ ಮತ್ತಷ್ಟು ಪ್ರತಿಭಟನೆಗಳು ಶುರುವಾದ ಹಿನ್ನೆಲೆಯಲ್ಲಿ ಸಂಘಟನೆಯ ಜೊತೆ ಒಪ್ಪಂದ ಮಾಡಿಕೊಂಡಿರುವ ಸರ್ಕಾರ ನಿಷೇಧವನ್ನು ತೆರವು ಮಾಡಿದೆ. ಸಂಘಟನೆಯ ವಿರುದ್ಧದ ನಿಷೇಧವನ್ನು ಹಿಂಪಡೆಯಲು ಪ್ರಧಾನಮಂತ್ರಿ ಇಮ್ರಾನ್ ಖಾನ್ ಶನಿವಾರವೇ ಅನುಮೋದನೆ ನೀಡಿದ್ದರು. ಅಲ್ಲದೇ, ಟಿಎಲ್ಪಿಯ 2000ಕ್ಕೂ ಅಧಿಕ ಕಾರ್ಯಕರ್ತರನ್ನು ಬಂಧಮುಕ್ತಗೊಳಿಸಿ ಆದೇಶಿಸಿದ್ದರು.
ಇದು ಸರ್ಕಾರದ ದೌರ್ಬಲ್ಯ ಮತ್ತು ಇತರೆ ಸಂಘಟನೆಗಳು ಮುಂದೊಂದು ದಿನ ಇದೇ ರೀತಿ ಸರ್ಕಾರದ ಮೇಲೆ ಒತ್ತಡ ಹಾಕಿ ಸಂಘಟನೆಗಳ ಪ್ರಭಾವವನ್ನು ಹೆಚ್ಚಿಸಿಕೊಳ್ಳಲಿವೆ ಎಂಬ ಚರ್ಚೆ ಶುರುವಾಗಿದೆ.