ಇಸ್ಲಾಮಾಬಾದ್ (ಪಾಕಿಸ್ತಾನ): ಕೋವಿಡ್ -19 ಲಸಿಕೆ ಆಮದು ಮಾಡಿಕೊಳ್ಳಲು ಪಾಕಿಸ್ತಾನ ಯಾವುದೇ ಆದೇಶವನ್ನು ನೀಡಿಲ್ಲ ಅಥವಾ ಲಸಿಕೆ ತಯಾರಿಸುವ ಕಂಪನಿಗಳಿಗೆ ಪಾಕಿಸ್ತಾನ ಬೇಡಿಕೆ ಇಟ್ಟಿಲ್ಲ ಎಂದು ಇಮ್ರಾನ್ ಖಾನ್ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಧ್ಯಮವೊಂದರ ಜೊತೆ ದೂರವಾಣಿ ಮೂಲಕ ಮಾತನಾಡಿರುವ ಪ್ರಧಾನ ಮಂತ್ರಿಯ ವಿಶೇಷ ಆರೋಗ್ಯ ಸಹಾಯಕ ಡಾ.ಫೈಸಲ್ ಖಾನ್ "ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಮಿಕರು ಮತ್ತು ಇತರರಿಗೆ ಮೊದಲ ಬ್ಯಾಚ್ ಕೋವಿಡ್-19 ಲಸಿಕೆಯನ್ನು ಪಡೆಯಲು ನಾವು ಶ್ರಮಿಸುತ್ತಿದ್ದೇವೆ. ಆದರೆ ಅಂತಿಮ ಆದೇಶವನ್ನು ಇನ್ನೂ ನಿಡಿಲ್ಲ ಮತ್ತು ಯಾವುದೇ ಲಸಿಕೆ ತಯಾರಕರಿಂದ ಮನವಿ ಸ್ವೀಕರಿಸಿಲ್ಲ" ಎಂದಿದ್ದಾರೆ.
ಚೀನಾದ ಸರ್ಕಾರಿ ಸ್ವಾಮ್ಯದ ಕಂಪನಿ ಸಿನೊಫಾರ್ಮ್‌ನಿಂದ ಕೋವಿಡ್ -19 ಲಸಿಕೆ ಆಮದು ಮಾಡಿಕೊಳ್ಳಲು ಇರುವ ಏಕೈಕ ಅಡಚಣೆಯನ್ನು ಶೀಘ್ರದಲ್ಲೇ ತೆಗೆದುಹಾಕಲಾಗುವುದು ಎಂದು ಜನವರಿ 13 ರಂದು ಪತ್ರಿಕೆಯೊಂದು ವರದಿ ಮಾಡಿತ್ತು.
ಪಾಕಿಸ್ತಾನವು ಒಟ್ಟು 5,14,338 ಕೋವಿಡ್ -19 ಪ್ರಕರಣಗಳು ಕಂಡುಬಂದಿದ್ದು,10,863 ಮಂದಿ ಸಾವಿಗೀಡಾಗಿದ್ದಾರೆ. ದೇಶದ ಉನ್ನತ ಆರೋಗ್ಯ ತಜ್ಞರು, ಚೀನಾದ ಸಿನೊಫಾರ್ಮ್ ತನ್ನ ಡೇಟಾವನ್ನು ಪಾಕಿಸ್ತಾನದ ಡ್ರಗ್ ರೆಗ್ಯುಲೇಟರಿ ಅಥಾರಿಟಿ (ಡಿಆರ್ಎಪಿ) ಗೆ ಸಲ್ಲಿಸಿದ್ದರೂ ಅದರ ಸಂಗ್ರಹದ ಬಗ್ಗೆ ಯಾವುದೇ ಒಪ್ಪಂದ ಮಾಡಿಕೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ.
"ಕ್ಯಾನ್ಸಿನೊ ಲಸಿಕೆ ಪ್ರಯೋಗಗಳು ಪ್ರಸ್ತುತ ನಡೆಯುತ್ತಿವೆ ಮತ್ತು ಅವರು ತಮ್ಮ ಡೇಟಾವನ್ನು ಒಂದೆರಡು ವಾರಗಲ್ಲಿ ಸಲ್ಲಿಸಲಿದ್ದಾರೆ. ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ ಬಗ್ಗೆಯೂ ನಾವು ಆಸಕ್ತಿ ಹೊಂದಿದ್ದೇವೆ, ಅವರು ಕೆಲವು ಡೇಟಾವನ್ನು ಸಲ್ಲಿಸಿದ್ದಾರೆ ಆದರೆ ನಾವು ಹೆಚ್ಚಿನ ಡೇಟಾವನ್ನು ಬಯಸಿದ್ದೇವೆ" ಎಂದು ಹೇಳಿದ್ದಾರೆ.
"ನಾವು ಕೋವಾಕ್ಸ್ ಸೌಲಭ್ಯದ ಮೂಲಕ ಮತ್ತು ನೇರ ಸಂಗ್ರಹಣೆಯ ಮೂಲಕ ಅಸ್ಟ್ರಾಜೆನೆಕಾ ಲಸಿಕೆ ಪಡೆಯಲು ಪ್ರಯತ್ನಿಸುತ್ತಿದ್ದೇವೆ" ಎಂದಿದ್ದಾರೆ.