ಲಾಹೋರ್: 26/11 ವಿಧ್ವಂಸಕ ಮುಂಬೈ ದಾಳಿಗೆ 12 ವರ್ಷಾಚರಣೆಗೆ ಕೆಲವೇ ದಿನ ಬಾಕಿ ಇರುವಾಗಲೇ ದಾಳಿಯ ಸಂಚುಕೋರ ಹಾಗೂ ಜಮಾತ್–ಉದ್– ದಾವಾ (ಜೆಯುಡಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್‌ಗೆ ಪಾಕಿಸ್ತಾನ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಹಫೀಜ್ ಸಯೀದ್‌ಗೆ ಮುಂಬೈ ದಾಳಿ ಹಾಗೂ ಇತರ ಪ್ರಕರಣಗಳಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ವಿಶ್ವ ಸಂಸ್ಥೆ ಗೊತ್ತುಪಡಿಸಿದ ಭಯೋತ್ಪಾದಕ ಸಯೀದ್, 10 ಮಿಲಿಯನ್ ಡಾಲರ್ ಹಣ ನೀಡಿದ್ದರಿಂದ ಕಳೆದ ವರ್ಷ ಜುಲೈ 17ರಂದು ಭಯೋತ್ಪಾದಕ ಹಣಕಾಸು ಪ್ರಕರಣಗಳಲ್ಲಿ ಬಂಧಿಸಲಾಗಿತ್ತು. ಆತನನ್ನು ಲಾಹೋರ್‌ನ ಉನ್ನತ ಭದ್ರತೆಯ ಕೋಟ್ ಲಖ್‌ಪತ್ ಜೈಲಿನಲ್ಲಿ ಇರಿಸಲಾಗಿದೆ.
ಲಾಹೋರ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ (ಎಟಿಸಿ) ಗುರುವಾರ ಜಮಾತ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ ಹಾಗೂ ನಾಲ್ಕು ಮುಖಂಡರಿಗೆ ಇತರ ಎರಡು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿದೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಸಯೀದ್ ಮತ್ತು ಅವರ ಇಬ್ಬರು ಆಪ್ತರಾದ ಜಾಫರ್ ಇಕ್ಬಾಲ್ ಮತ್ತು ಯಾಹ್ಯಾ ಮುಜಾಹಿದ್ ಅವರಿಗೆ ತಲಾ 10 ಮತ್ತು ಒಂದೂವರೆ ವರ್ಷ ಶಿಕ್ಷೆ ವಿಧಿಸಲಾಗಿದ್ದು, ಜೆಯುಡಿ ಮುಖ್ಯಸ್ಥರ ಸೋದರ ಮಾವ ಅಬ್ದುಲ್ ರೆಹಮಾನ್ ಮಕ್ಕಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.