ಲಾಹೋರ್ (ಪಾಕಿಸ್ತಾನ): 2008ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಮತ್ತು ನಿಷೇಧಿತ ಜಮಾತ್ - ಉದ್ - ದವಾ ಮುಖ್ಯಸ್ಥ ಹಫೀಜ್ ಸಯೀದ್ ಮನೆ ಹೊರಗೆ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಅಧಿಕಾರಿಗಳು ಪಂಜಾಬ್ ಪ್ರಾಂತ್ಯದ ವಿವಿಧ ನಗರಗಳಲ್ಲಿ ದಾಳಿ ನಡೆಸಿ ಹಲವಾರು ಶಂಕಿತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಜೋಹರ್ ಟೌನ್‌ನ ಬಿಒಆರ್ ಸೊಸೈಟಿಯಲ್ಲಿರುವ ಸಯೀದ್ ಅವರ ನಿವಾಸದ ಹೊರಗೆ ನಡೆದ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದು, 21 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅವರ ಮನೆ ಕಾವಲು ಕಾಯುತ್ತಿದ್ದ ಪೊಲೀಸ್ ಅಧಿಕಾರಿಗಳಿಗೂ ಗಂಭೀರ ಗಾಯಗಳಾಗಿವೆ. ಸ್ಫೋಟದ ತೀವ್ರತೆಯಿಂದ ಸಯೀದ್ ಮನೆ ಕಿಟಕಿ, ಗೋಡೆಗಳು ಚೂರು ಚೂರಾಗಿದ್ದವು. ಈವರೆಗೆ ಘಟನೆಯ ಜವಾಬ್ದಾರಿಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ.
ಸ್ಫೋಟಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಪಂಜಾಬ್‌ನ ವಿವಿಧ ನಗರಗಳಲ್ಲಿ ದಾಳಿ ನಡೆಸಿ, ಹಲವಾರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿದೆ. ಸಿಟಿಡಿ ಮತ್ತು ಗುಪ್ತಚರ ಸಂಸ್ಥೆಗಳು ಅಪರಾಧದ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿ, ತನಿಖೆ ನಡೆಸುತ್ತಿವೆ.
ತನಿಖೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ತನಿಖಾ ಸಂಸ್ಥೆಗಳು ಈ ಪ್ರದೇಶದಲ್ಲಿ ಜಿಯೋ - ಫೆನ್ಸಿಂಗ್ ಪ್ರಾರಂಭಿಸಿವೆ ಎಂದು ತಿಳಿದು ಬಂದಿದೆ. ಜಿಯೋಫೆನ್ಸಿಂಗ್‌ನಲ್ಲಿ, ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್ (ಜಿಪಿಎಸ್) ಅಥವಾ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್‌ಐಡಿ) ತಂತ್ರಜ್ಞಾನದ ಮೂಲಕ ಒಂದು ಪ್ರದೇಶದ ಸುತ್ತ ಒಂದು ವಾಸ್ತವ ಭೌಗೋಳಿಕ ಗಡಿಯನ್ನು ರಚಿಸಲಾಗುತ್ತದೆ. ಯಾವುದೇ ಮೊಬೈಲ್ ಪ್ರದೇಶಕ್ಕೆ ಎಂಟ್ರಿ ಕೊಟ್ಟಾಗ ಅಥವಾ ನಿರ್ಗಮಿಸಿದಾಗ ಆ ಬಗ್ಗೆ ಮಾಹಿತಿ ದೊರೆಯುತ್ತದೆ.
ಇದನ್ನೂ ಓದಿ:ಉಗ್ರ ಹಫೀಜ್ ಸಯೀದ್ ನಿವಾಸದ ಬಳಿ ಸ್ಫೋಟ.. ಮೂವರು ಸಾವು, 16 ಮಂದಿ ಗಾಯ
ಈ ಮಧ್ಯೆ ಈ ಕೃತ್ಯವನ್ನು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಖಂಡಿಸಿದ್ದಾರೆ. ಬುಧವಾರ ಇಸ್ಲಾಮಾಬಾದ್‌ನ ಪಾರ್ಲಿಮೆಂಟ್ ಹೌಸ್‌ನಲ್ಲಿ ಮಾತನಾಡಿದ ಬಿಲಾವಲ್, ಅಫ್ಘಾನ್ ಶಾಂತಿ ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ನೀತಿ ಸರಿಯಾಗಿಲ್ಲ ಮತ್ತು ಇಂತಹ ಘಟನೆಗಳು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದಿದ್ದಾರೆ.